ಬೆಂಗಳೂರು: ಧರ್ಮಸ್ಥಳ ಪ್ರಕರಣದ ಕುರಿತು ಎಸ್‌ಐಟಿ ತನಿಖೆಗೆ ನೀಡಿರುವುದನ್ನು ಸ್ವಾಗತ ಮಾಡುತ್ತೇವೆ. ಕಾಲ ಮಿತಿಯಲ್ಲಿ ಕಾನೂಬದ್ದವಾಗಿ ಎಸ್‌ಐಟಿ ತನಿಖೆಯಾಗಬೇಕು.
ಯಾರನ್ನೋ ಗುರಿಯಾಗಿಸಿಕೊಂಡು ತನಿಖೆ ನಡೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಬಗ್ಗೆ ಸ್ಥಳೀಯರು ಹಾಗೂ ಅಲ್ಲಿ ಬಹಳ ದಿನಗಳವರೆಗೆ ಕೆಲಸ ಮಾಡಿರುವ ಪೊಲೀಸರಿಗೆ ಗೊತ್ತಿರುತ್ತದೆ. ದೂರು ಕೊಟ್ಟವರು ತಮ್ಮ ಮೇಲೆ ಒತ್ತಡ ಇದೆ ಎಂದು ಹೇಳಿದ್ದಾರೆ. ದೂರು ಕೊಟ್ಟವರಿಗೆ ಯಾರು ಒತ್ತಡ ಹಾಕಿದ್ದಾರೆ ಎಂದು ಹೇಳಬೇಕು ಈ ಬಗ್ಗೆ ತನಿಖೆಯಾಗಬೇಕು. ಅಲ್ಲಿ ನಡೆದಿರುವ ಪ್ರಕರಣದ ಬಗ್ಗೆ ಪೊಲಿಸರು ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳ ಪುರಾತನ ಹಾಗೂ ನಂಬಿಕೆಗೆ ಹೆಸರಾಗಿರುವ ದೇವಸ್ಥಾನ, ಆ ದೇವಸ್ಥಾನದ ಮೇಲಿನ ಜನರ ನಂಬಿಕೆ ಕೆಡಿಸುವ ಕೆಲಸವನ್ನು ಮಾಡಬಾರದು ಎಂದು ಹೇಳಿದರು.
ಇನ್ನು ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ನಡೆಯುತ್ತಿರುವ ಆಂತರಿಕ ಕಚ್ಚಾಟದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬರುವ ದಿನಗಳಲ್ಲಿ ರಾಜ್ಯದಲ್ಲಿ ದೊಡ್ಡ ರಾಜಕೀಯ ಬದಲಾವಣೆ ಆಗುತ್ತದೆ. ಯಾರು ಏನೇ ಹೇಳಿದರು. ಆಗುವ ಬೆಳವಣಿಗೆಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಇದೇ ವೇಳೆ ಮಾಜಿ ಸಚಿವರಾದ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಅವರು ಒಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರನ್ನು ಒಟ್ಟು ಗೂಡಿಸುವ ಅಗತ್ಯವಿಲ್ಲ. ಅವರು ಮೊದಲಿನಿಂದಲೂ ಒಟ್ಟಾಗಿದ್ದಾರೆ. ರಾಜಕೀಯಕ್ಕೆ ಬರುವ ಮುಂಚಿನಿಂದಲೂ ಅವರ ಸ್ನೇಹ ಗಾಢವಾಗಿದೆ ಎಂದರು.





