Mysore
17
clear sky

Social Media

ಬುಧವಾರ, 21 ಜನವರಿ 2026
Light
Dark

ಹಗಲು ದರೋಡೆ, ಬ್ಯಾಂಕುಗಳಲ್ಲಿ ಸುರಕ್ಷತೆ ಇಲ್ಲ : ಆರ್‌.ಅಶೋಕ ಆರೋಪ

r ashok

ಬೆಂಗಳೂರು : ಬೆಂಗಳೂರಿನಲ್ಲಿ ಹಗಲಿನಲ್ಲಿ ಜನ ನಿಬಿಡ ಪ್ರದೇಶದಲ್ಲಿ ಕೇವಲ 7 ನಿಮಿಷದಲ್ಲಿ 7 ಕೋಟಿ ರೂ. ದರೋಡೆಯಾಗಿದ್ದು, ಜನರು ಬ್ಯಾಂಕ್‌ಗೆ ಹೋಗಲು ಭಯಪಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ವಿಧಾನಸೌಧದ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಸತ್ತುಹೋಗಿದೆ. ಪೊಲೀಸರ ಬಗ್ಗೆ ದರೋಡೆಕೋರರಿಗೆ, ಕಳ್ಳರಿಗೆ ಭಯವಿಲ್ಲವಾಗಿದೆ. ಬೆಂಗಳೂರಿನ ಬ್ಯಾಂಕುಗಳು ಎಷ್ಟು ಸುರಕ್ಷಿತ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಹಾಡುಹಗಲೇ ದುಷ್ಕರ್ಮಿಗಳು ರಾಬರಿ ನಡೆಸಿ ಪರಾರಿ ಆಗುತ್ತಾರೆ ಎಂದರೆ ಪರಿಸ್ಥಿತಿ ಯಾವ ಸ್ಥಿತಿ ತಲುಪಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.

ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ, ಧರ್ಮಸ್ಥಳ ಘಟನೆ ಹೀಗೆ ಅನೇಕ ಪ್ರಕರಣಗಳಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ. ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ಕಾಂಗ್ರೆಸ್‌ ನಾಯಕರು ದೆಹಲಿಗೆ ಹೋಗಿರುವುದರಿಂದ ಪೊಲೀಸ್‌ ಇಲಾಖೆಯ ಮೇಲೆ ಯಾರಿಗೂ ನಿಯಂತ್ರಣವಿಲ್ಲದಂತಾಗಿದೆ. ಪ್ರತಿಯೊಂದು ಇಲಾಖೆಯಲ್ಲಿ ಕಮಿಶನ್‌ ವ್ಯವಸ್ಥೆ ಇರುವುದರಿಂದ ಎಲ್ಲೂ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ:-ಹಗಲು ದರೋಡೆ, ಬ್ಯಾಂಕುಗಳಲ್ಲಿ ಸುರಕ್ಷತೆ ಇಲ್ಲ : ಆರ್‌.ಅಶೋಕ ಆರೋಪ

ಕಾಂಗ್ರೆಸ್‌ ನಾಯಕರು ವಚನಭ್ರಷ್ಟರಾಗಿದ್ದಾರೆ. ಸಿದ್ದರಾಮಯ್ಯ ಓಸಿ ಮುಖ್ಯಮಂತ್ರಿ ಎಂದು ಡಿ.ಕೆ.ಶಿವಕುಮಾರ್‌ ಪರೋಕ್ಷವಾಗಿ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಡಲ್ಲ ಎಂದು ದಿಟ್ಟತನದಿಂದ ಹೇಳಿದ್ದಾರೆ. ಅಗತ್ಯ ಇಲ್ಲದೆಯೇ ನಾನೇ ಸಿಎಂ ಎಂದು ಪದೇ ಪದೇ ಹೇಳುತ್ತಿದ್ದಾರೆ. ಇನ್ನು ಒಂದು ತಿಂಗಳೊಳಗೆ ಈ ಪ್ರಹಸನದ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ ಎಂದರು.

ಆರ್‌ಸಿಬಿ ಕಾಲ್ತುಳಿತ ಘಟನೆ ವರದಿಯಲ್ಲಿ ಯಾವುದೇ ಹುರುಳಿಲ್ಲ. 11 ಮಂದಿ ಅಮಾಯಕರ ಸಾವಿಗೆ ಸರ್ಕಾರ ಕಾರಣ. ಘಟನೆಯಿಂದಾಗಿ ಯಾವುದೇ ಕ್ರಿಕೆಟ್‌ ಪಂದ್ಯಗಳು ಇಲ್ಲಿ ನಡೆಯುತ್ತಿಲ್ಲ. ಆರ್‌ಸಿಬಿ ಹಾಗೂ ಕೆಎಸ್‌ಸಿಎ ಮೇಲೆ ಗೂಬೆ ಕೂರಿಸಲು ತನಿಖಾ ವರದಿ ಸಿದ್ಧಪಡಿಸಲಾಗಿದೆ ಎಂದರು.

ತನಿಖೆ ಸರಿಯಾಗಿ ನಡೆದಿಲ್ಲ
ಧರ್ಮಸ್ಥಳ ಪ್ರಕರಣ ನಗರ ನಕ್ಸಲರು ಮಾಡಿರುವ ದೊಡ್ಡ ನಾಟಕ. ತಿಮರೋಡಿ ಗ್ಯಾಂಗ್‌ ವಿರುದ್ಧ ಸರ್ಕಾರ ಕ್ರಮವಹಿಸಿಲ್ಲ. ಸರ್ಕಾರದ ಪರ ವಕೀಲರು ಸರಿಯಾಗಿ ವಾದ ಮಂಡಿಸಿಲ್ಲ. ಇದರ ತನಿಖೆ ಕೂಡ ಸರಿಯಾಗಿ ನಡೆದಿಲ್ಲ. ಕ್ಷೇತ್ರದ ಹೆಸರು ಕೆಡಿಸಿದವರ ವಿರುದ್ಧ ಯಾವುದೇ ಕ್ರಮವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ. ಮೂಲ ಸೌಲಭ್ಯಗಳ ಕೊರತೆ ಇದೆ, ಕೊಠಡಿಗಳಿಲ್ಲ, ಶಿಕ್ಷಕರ ನೇಮಕವಾಗಿಲ್ಲ. ಇಂತಹ ಸ್ಥಿತಿಯಲ್ಲಿ ಶಾಲೆಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬದಲು ಉತ್ತೀರ್ಣದ ಗರಿಷ್ಠ ಅಂಕವನ್ನು ಇಳಿಸಲಾಗಿದೆ. ಈ ಮೂಲಕ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರೆಂದು ತೋರಿಸಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಒಳಿತಾಗುವುದಿಲ್ಲ. ಈ ಕ್ರಮದಿಂದ ಶಿಕ್ಷಣ ಕ್ಷೇತ್ರ ಮುಂದುವರಿಯುವುದಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕೆಂದು ಸ್ಪೀಕರ್‌ ಬಳಿ ಮನವಿ ಮಾಡುತ್ತೇನೆ ಎಂದರು.

Tags:
error: Content is protected !!