ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿ ಇಂದಿಗೆ ಬರೊಬ್ಬರಿ 100 ದಿನ ಕಳೆದಿದೆ. ಸಿನಿ ಜಗತ್ತಿನಲ್ಲಿ ನಮ್ಮ ನೂರು ದಿನ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದ ಸ್ಯಾಂಡಲ್‌ವುಡ್ ʻದಾಸʼನಿಗೆ ಬಹುದೊಡ್ಡ ಸಂಕಷ್ಟ ಎದುರಾಗಿದ್ದು, ಜೈಲಲ್ಲಿ 100ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜೂನ್ 8 ರಂದು ರೇಣುಕಾಸ್ವಾಮಿ ಕೊಲೆ ನಡೆಯಿತು. ಜೂನ್ 11ರಂದು ಮೈಸೂರಿನ ಹೋಟೆಲ್‌ನಲ್ಲಿ ದರ್ಶನ್ ಬಂಧನ ಆಯಿತು. ಕೊಲೆ ನಡೆದ ಮೂರು ದಿನದೊಳಗೆ ನಟನ ಬಂಧನವಾಯಿತು. ಅದೇ ದಿನ ದರ್ಶನ್ ಅವರನ್ನು ಬೆಂಗಳೂರಿಗೆ ಪೊಲೀಸರು ಕರೆದಂತಿದ್ದರು. ಆ ಬಳಿಕ ಕೇಸ್‌ನಲ್ಲಿ ಭಾಗಿಯಾದ ಇತರ 16 ಆರೋಪಿಗಳನ್ನು ಬಂಧಿಸಲಾಯಿತು. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು. ಕೊಲೆ ಕೇಸ್ ಸಂಬಂಧ ದರ್ಶನ್ ಅವರನ್ನು 12ದಿನ ಪೊಲೀಸರು ವಿಚಾರಣೆ ನಡೆಸಿದ್ದರು.
ಬಳಿಕ ಕೋರ್ಟ್ ದರ್ಶನ್‌ಗೆ ನ್ಯಾಯಾಂಗ ಬಂಧನ ವಿಧಿಸಿತು. ಹೀಗಾಗಿ, ದಾಸ ಪರಪ್ಪನ ಅಗ್ರಹಾರ ಸೇರಿದ್ದರು. ಅಲ್ಲಿ ಸುಮಾರು ಎರಡು ತಿಂಗಳು ಇದ್ದ ಅವರಿಗೆ ರೌಡಿ ವಿಲ್ಸನ್ ಗಾರ್ಡನ್ ನಾಗ ಅಂಡ್ ಟೀಂ ಟೀ ಪಾರ್ಟಿ ನೀಡಿದ್ದ ಫೋಟೋ ವೈರಲ್ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಸದ್ಯ ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಸೆಪ್ಟಂಬರ್ 30 ರವರೆಗೆ ವಿಸ್ತರಣೆ ಆಗಿದೆ. ಅಂದ್ಹಾಗೆ ದರ್ಶನ್ ಈ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದಾರೆ.
ಇನ್ನು ತಮ್ಮ ನೆಚ್ಚಿನ ನಟನ ದುಸ್ಥಿತಿ ಕಂಡು ಅಭಿಮಾನಿಗಳು ಬೇಸರದಲ್ಲಿ ಕಾಲ ಕಳೆಯುತ್ತಿದ್ದಾರೆ. ಪ್ರತಿ ಸಿನಿಮಾ ರೀಲಿಸ್ ಆಗಿ 100ದಿನ ಬಾರಿಸಿದಾಗ ಅದ್ದೂರಿಯಾಗಿ ಸಂಭ್ರಮಿಸುತ್ತಿದ್ದ ಅಭಿಮಾನಿಗಳಿಗೆ ದಿಕ್ಕು ತೋಚದಾಗಿದೆ. ಇದೀಗ ತನ್ನ ನೆಚ್ಚಿನ ನಟ ಜೈಲಲ್ಲಿ 100ದಿನ ಕಳೆಯುವಂತಾಗಿರುವುದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ತರಸಿದೆ.
ಅಷ್ಟೇ ಅಲ್ಲದೇ, ದರ್ಶನ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ʻಬಾಸ್ ಹೊರಗಿರಲಿ, ಒಳಗಿರಲಿʼ 100ದಿನ ಫಿಕ್ಸ್ ಎಂದು ಪೋಸ್ಟ್ ಮಾಡುತ್ತಿದ್ದಾರೆ.