Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕೋವಿಡ್‌ ಹಣ ತಿಂದವರನ್ನು ಬಿಡಲ್ಲ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಕೋವಿಡ್ ಅಕ್ರಮದಲ್ಲಿ ಕುನ್ಹಾ ಅವರ ಸಮಿತಿ ಶಿಫಾರಸ್ಸಿನಂತೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕೋವಿಡ್ ಹಣ ತಿಂದವರನ್ನು ಬಿಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ನ್ಯಾಯಮೂರ್ತಿ ಮೈಖಲ್ ಕುನ್ಹ ವಿಚಾರಣೆ ಆಯೋಗದ ಶಿಫಾರಸ್ಸು ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಉಸ್ತುವಾರಿ ಹಾಗೂ ಅಧಿಕಾರಿಗಳ ಸಮಿತಿ ವರದಿ ಪರಾಮರ್ಶೆ ಹಾಗೂ ಶಿಫಾರಸ್ಸು ಕುರಿತು ವಿಧಾನಸೌಧದಲ್ಲಿ ಉಪಸಮಿತಿಯು ಶನಿವಾರ ಸಭೆ ನಡೆಸಿತು. ನಂತರ ಸಮಿತಿಯ ಮುಖ್ಯಸ್ಥರಾದ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ನಮ್ಮ ಸರ್ಕಾರ ಕೋವಿಡ್ ಅವಧಿಯಲ್ಲಿನ ಅಕ್ರಮದ ಕುರಿತ ನ್ಯಾ.ಜಾನ್ ಮೈಕಲ್ ಕುನ್ಹಾ ಅವರ ವರದಿಯನ್ನು ಸ್ವೀಕರಿಸಿದ್ದೇವೆ. ಈ ವರದಿಯ ಪರಿಶೀಲನೆಯನ್ನು ಮಾತ್ರ ನಾವು ಮಾಡುತ್ತಿದ್ದೇವೆ. ಉಳಿದಂತೆ ಸಮಿತಿ ವರದಿಯ ಶಿಫಾರಸ್ಸಿನಂತೆ ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಮತ್ತೊಂದು ಕಡೆ ಇಲಾಖೆಯಲ್ಲಿ ಅಧಿಕಾರಿಗಳ ವಿರುದ್ಧವೂ ವಿಚಾರಣೆ ನಡೆಯಲಿದೆ. ಕೆಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಹೀಗಾಗಿ ಎಷ್ಟು ಪ್ರಕರಣ ದಾಖಲಾಗುತ್ತವೋ ಗೊತ್ತಿಲ್ಲ ಎಂದು ತಿಳಿಸಿದರು.

ಚಾಮರಾಜನಗರ ಆಕ್ಸಿಜನ್‌ ದುರಂತ: ಪ್ರಕರಣ ಮತ್ತೆ ತನಿಖೆಗೆ
ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತಪ್ಪು ನಡೆದಿಲ್ಲ ಎಂದು ವರದಿ ನೀಡಿದ್ದನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ. ಹೀಗಾಗಿ ಈ ಪ್ರಕರಣದ ಬಗ್ಗೆ ಮತ್ತೆ ತನಿಖೆಯಾಗಬೇಕು. ನಾನು ಹಾಗೂ ಸಿದ್ದರಾಮಯ್ಯ ಅವರೇ ಆ ಆಸ್ಪತ್ರೆಗೆ ಹೋಗಿ ಅಲ್ಲಿನ ಪರಿಸ್ಥಿತಿ ಅಲೋಕನ ಮಾಡಿದ್ದೆವು. 36 ಜನ ಸತ್ತರೆ, ಆಗಿನ ಸಚಿವರು ಕೇವಲ ಮೂರು ಮಂದಿ ಸತ್ತಿದ್ದರು ಎಂದು ಹೇಳಿದ್ದರು. ನಾನು ಮೃತಪಟ್ಟ 36 ಮಂದಿಯ ಮನೆಗಳಿಗೆ ಭೇಟಿ ನೀಡಿದ್ದೇನೆ. ಈ ವಿಚಾರವಾಗಿ ಬೆಳಗಾವಿಯಲ್ಲಿ ಸಭೆ ಮಾಡಿ ಈ ವಿಚಾರಣೆ ಪ್ರಕ್ರಿಯೆ ಪರಿಶೀಲಿಸುತ್ತೇವೆ. ಈ ಸಮಿತಿಯು ಅಧಿಕಾರಿಗಳ ವಿಚಾರಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ ಎಂದರು.

ಕುನ್ಹಾ ಅವರ ವರದಿ ಆಧಾರದ ಮೇಲೆ ಎಸ್‍ಐಟಿ ರಚನೆ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲವೂ ಅಂತಿಮವಾದ ಬಳಿಕ ನಿಮಗೆ ಮಾಹಿತಿ ನೀಡುತ್ತೇವೆ. ಈ ವಿಚಾರವಾಗಿ ನಾವು ಬಿಜೆಪಿಯವರಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಸಮಿತಿ ಶಿಫಾರಸ್ಸು ಪರಿಶೀಲಿಸುತ್ತಿದ್ದು, ಅಧಿಕಾರಿಗಳಿಗೆ ವಿಚಾರಣೆಯ ನಡೆಸುವ ಸಂಪೂರ್ಣ ಅಧಿಕಾರ ನೀಡಿದ್ದೇವೆ ಎಂದು ತಿಳಿಸಿದರು.

Tags: