ಬೆಂಗಳೂರು: ಪಕ್ಕದ ರಾಜ್ಯ ಕೇರಳದಲ್ಲಿ ಹೊಸ ತಳಿಯ ಕೋವಿಡ್ ಪ್ರಕರಣ ದಾಖಲಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಕರ್ನಾಟಕದಲ್ಲಿ ಆರ್ಟಿಪಿಸಿಆರ್ ಕಿಟ್ಗಳಿಂದ ಹಿಡಿದು ಕೊರೊನಾ ಪರೀಕ್ಷೆ ತನಕ ಎಲ್ಲದರ ಸಿದ್ಧತೆಯನ್ನು ಈಗಲೇ ಆರೋಗ್ಯ ಇಲಾಖೆ ಮಾಡಿಕೊಳ್ಳಲು ಮುಂದಾಗಿದೆ.
ಈ ಹಿಂದೆ ಭಾರತ ಸೇರಿದಂತೆ ವಿಶ್ವದಲ್ಲಿ ತಲ್ಲಣವನ್ನುಂಟು ಮಾಡಿದ್ದ ಕೋವಿಡ್ ವೈರಸ್ ಮತ್ತೆ ಸದ್ದು ಮಾಡುತ್ತಿದೆ. ಪಕ್ಕದ ರಾಜ್ಯಕೇರಳದಲ್ಲಿ ಹೊಸ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ಆಸ್ಪತ್ರೆಗಳಲ್ಲಿ ಪೂರ್ವ ಸಿದ್ಧತೆಯ ಮಾಕ್ ಡ್ರಿಲ್ ಕೈಗೊಳ್ಳಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಕಾಸಸೌಧದಲ್ಲಿ ಕೋವಿಡ್ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಸಚಿವರು, ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳು, ಆಮ್ಲಜನಕದ ಲಭ್ಯತೆ ಮತ್ತು ಔಷಧಗಳು ಸೇರಿದಂತೆ ಹಾಸಿಗೆಗಳ ಸಾಮರ್ಥ್ಯ ಪರಿಶೀಲಿಸಲು ಎಲ್ಲಾ ಆಸ್ಪತ್ರೆಗಳಲ್ಲಿ ಪೂರ್ವ ಸಿದ್ಧತೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪರಿಸ್ಥಿತಿ ಆತಂಕಕಾರಿ ಆಗಿಲ್ಲದಿದ್ದರೂ ಅಂತಹ ಪರಿಸ್ಥಿತಿ ಮರುಕಳಿಸಿದರೆ ಸನ್ನದ್ಧರಾಗಿರಲು ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಕೊರತೆಯಿದ್ದಲ್ಲಿ ಅದನ್ನು ಈಗಲೇ ಸರಿಪಡಿಸಲು ನಿರ್ದೇಶನ ನೀಡಿರುವುದಾಗಿ ತಿಳಿಸಿದರು.