Mysore
21
scattered clouds
Light
Dark

ಕೊವೀಡ್ ಭ್ರಷ್ಟಾಚಾರ | ಕುನ್ಹಾ ವರದಿ ಅಧ್ಯಯನಕ್ಕೆ ಅಧಿಕಾರಿಗಳ ಸಮಿತಿ

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ವೈದ್ಯಕೀಯ ಪರಿಕರಗಳ ಖರೀದಿ, ವಿತರಣೆ ಮತ್ತು ಬಳಕೆ ವಿಷಯಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಸರ್ಕಾರ ನೇಮಿಸಿದ ನ್ಯಾಯಮೂರ್ತಿ  ಮೈಕೆಲ್ ಡಿ. ಕುನ್ಹಾ ನೇತೃತ್ವದ ನ್ಯಾಯಾಂಗ ಆಯೋಗ ಒಂದು ವರದಿಯನ್ನು ಸಲ್ಲಿಸಿದ್ದು, ವರದಿಯನ್ನು ವಿಶ್ಲೇಷಿಸಿ ಅಧ್ಯಯನ ಮಾಡಿ ಮುಂದಿನ ಕ್ರಮಗಳ ಬಗ್ಗೆ ಅಗತ್ಯದ ಶಿಫಾರಸ್ಸುಗಳನ್ನು ಮಾಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ  ಶಾಲಿನಿ ರಜನೀಶ್ ಹಾಗೂ ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ  ಎಲ್.ಕೆ ಅತೀಕ್ ಅವರನ್ನೊಳಗೊಂಡ ಉನ್ನತಾಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ ಎಂದು ಕಾನೂನು, ನ್ಯಾಯ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್ .ಕೆ. ಪಾಟೀಲ ಇಂದಿಲ್ಲಿ ಪ್ರಕಟಿಸಿದರು.

ಸಚಿವ ಸಂಪುಟದ ನಿರ್ಣಯಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಅವರು, ಕೋವಿಡ್ ಚಿಕಿತ್ಸೆಯ ಸಂದರ್ಭದಲ್ಲಿ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ನ್ಯಾಯಾಂಗ ಆಯೋಗ ವರದಿ ಸಲ್ಲಿಸಿದೆ ಎಂದು ತಿಳಿಸಿದರು.

ನಾನು  ಮತ್ತು ರಾಮಲಿಂಗಾ ರೆಡ್ಡಿಯವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೋವಿಡ್ ಭ್ರಷ್ಟಾಚಾರದ ಕುರಿತು ವಿವರವಾದ ವರದಿಯನ್ನು ವಿಧಾನ ಮಂಡಲಕ್ಕೆ ಸಲ್ಲಿಸಲಾಗಿತ್ತು. ಆದರೆ ಬಿ.ಜೆ.ಪಿ. ಆಡಳಿತಾವಧಿಯಲ್ಲಿ ಅಂದಿನ ಸಭಾಧ್ಯಕ್ಷರು ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಲಿಲ್ಲ ಎಂದು  ಹೇಳಿದರು.

ಕೋವಿಡ್ ಪರಿಕರಗಳ ಖರೀದಿಯಲ್ಲಿ ಬಹು ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿತ್ತು. ಈ ವರದಿಯ ನಂತರ  ಮೈಕೆಲ್ ಡಿ. ಕುನ್ಹಾ ನೇತೃತ್ವದ ಆಧಾರದ ಮೇಲೆ ನ್ಯಾಯಾಂಗ ಆಯೋಗ ರಚನೆಯಾಗಿತ್ತು. ಈ ಆಯೋಗ 7 ಸಂಪುಟದಲ್ಲಿ ವರದಿ ಸಲ್ಲಿಸಿದೆ. ನೂರಾರು ಕೋಟಿ ರೂಪಾಯಿಗಳ ಭ್ರಷ್ಠಾಚಾರ, ಸರ್ಕಾರಿ ಕಡತಗಳ ಕಾಣೆಯಾಗುವಿಕೆ ಬಹು ಪ್ರಮುಖವಾದ ಅಂಶವಾಗಿದೆ ಎಂದು ಸಚಿವರು ವಿವರಿಸಿದರು.

ಮುಡಾ ಹಗರಣದ ನಂತರ ಕೋವಿಡ್ ಭ್ರಷ್ಟಾಚಾರವನ್ನು ಪ್ರಸ್ತಾಪಿಸುತತಿರುವುದು ಪ್ರತಿಕಾರದ ಕ್ರಮವಲ್ಲವೇ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಮುಡಾ ಎಂಬ ಹೆಸರಿನ ಹಗರಣವಲ್ಲದಿದ್ದರೂ ಪ್ರಸ್ತಾಪವಾಗಿ ಕೇವಲ ಎರಡು ತಿಂಗಳು ಗತಿಸಿದೆ. ಆದರೆ ಕೊವೀಡ್ ಭ್ರಷ್ಟಾಚಾರ ಕುರಿತು ನ್ಯಾಯಾಂಗ ಆಯೋಗ ರಚನೆಯಾಗಿ ಒಂದು ವರ್ಷ ಕಳೆದಿದೆ. ಪ್ರತಿಕಾರದ ಕ್ರಮ ಎಲ್ಲಿಂದ ಬಂತ್ತು ಎಂದು ಮರು ಪ್ರಶ್ನೆ ಮಾಡಿದರು. ಕೊವೀಡ್ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ಆಯೋಗದ ವರದಿ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು  ಎಂದು ತಿಳಿಸಿದರು.