ಬೆಂಗಳೂರು: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ನಾಳೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಇಂದು ವಾದ-ಪ್ರತಿವಾದ ಆಲಿಸಿದ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಅಪರಾಧಿಗಳ ಹೇಳಿಕೆಯನ್ನು ದಾಖಲಿಸಿಕೊಂಡು ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ಮುಂದೂಡಿದರು. ಹೀಗಾಗಿ ಯೋಗೀಶ್‍ಗೌಡ ಕೊಲೆ ಪ್ರಕರಣದ 17 ಅಪರಾಧಿಗಳಿಗೆ ನ್ಯಾಯಾಲಯ ನೀಡುವ ಶಿಕ್ಷೆ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.
ಇದಕ್ಕೂ ಮುನ್ನ ನ್ಯಾಯಾಲಯದಲ್ಲಿ ಎರಡೂ ಕಡೆ ಭಾರೀ ವಾದ ಮತ್ತು ಪ್ರತಿವಾದ ನಡೆಯಿತು. ಸಿಬಿಐ ಪರ ಹಿರಿಯ ವಕೀಲ ಎಸ್.ಪಿ.ರಾಜು, ಅಪರಾಧಿಗಳ ಪರ ಹಿರಿಯ ವಕೀಲರಾದ ಶಂಕರಪ್ಪ, ಶ್ಯಾಂಸುಂದರ್ ಮತ್ತು ಬಾಲನ್ ವಾದ ಮಂಡನೆ ಮಾಡಿದರು.
ಯೋಗೀಶ್ ಗೌಡ ಕೊಲೆ ಪ್ರಕರಣ ವಿಚಾರಣೆಯ ಅಂತಿಮ ಹಂತದಲ್ಲಿ, ಎಲ್ಲ ಆರೋಪಿಗಳಿಗೂ ತಮಗೆ ಸಂಬಂಧಿಸಿದಂತೆ ಏನಾದರೂ ಹೇಳಿಕೊಳ್ಳುವ ಅವಕಾಶ ನೀಡಲಾಗಿತ್ತು. ಈ ವೇಳೆ ಪ್ರಮುಖ ಆರೋಪಿ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ ಎಲ್ಲಾ ಆರೋಪಿಗಳು ನ್ಯಾಯಾಧೀಶರ ಮುಂದೆ ಕೈಮುಗಿದು ಭಾವುಕರಾಗಿ ಮಾತನಾಡಿದರು.
ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜಡ್ಜ್ ಮುಂದೆ ಕೈಮುಗಿದು ಕಣ್ಣೀರು ಹಾಕಿದ್ದಾರೆ. ನಾನು 27 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ನಾನು ಯಾರಿಗೂ ತೊಂದರೆ ಮಾಡಿಲ್ಲ. ನನ್ನ ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಇದ್ದಾರೆ. ನಾನು ಮೂರು ಬಾರಿ ಶಾಸಕರಾಗಿದ್ದೇನೆ. ರಾಜಕೀಯವಾಗಿ ನನ್ನನ್ನು ಸಹಿಸಲಾರದವರು ಪಿತೂರಿ ಮಾಡಿ ನನ್ನ ಮೇಲೆ ಪ್ರಕರಣ ಹಾಕಿಸಿದ್ದಾರೆ. ಬೇಕಾದರೆ ಧಾರವಾಡದಲ್ಲಿ ಯಾರನ್ನೆ? ಕೇಳಿ, ನಾನು ಯಾರಿಗೂ ಏನೂ ತೊಂದರೆ ಮಾಡಿಲ್ಲ. ನಾನು ಕೃಷಿಕ, ನನ್ನ ಬಳಿ ಸುಮಾರು 3 ಸಾವಿರ ಹಸುಗಳು ಇವೆ. ಅವುಗಳ ಪೋಷಣೆ ಮಾಡಬೇಕು. ನಾನು ತಪ್ಪು ಮಾಡಿಲ್ಲ ಸಾರ್ ಎಂದು ಕಣ್ಣಿ?ರು ಹಾಕುತ್ತಾ ನ್ಯಾಯಾಧೀಶರ ಎದುರು ಮನವಿ ಮಾಡಿಕೊಂಡರು.





