Mysore
17
scattered clouds

Social Media

ಸೋಮವಾರ, 02 ಫೆಬ್ರವರಿ 2026
Light
Dark

ನಿಗದಿತ ಸಮಯದಲ್ಲಿ ಕೆಲಸ ಮುಗಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ: ಸಚಿವ ಪ್ರಿಯಾಂಕ್‌ ಖರ್ಗೆ

priyank kharge

ಬೆಂಗಳೂರು : ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗಳನ್ನು ಗುತ್ತಿಗೆ ಪಡೆದು ಕೆಲವು ವರ್ಷಗಳಿಂದ ಕಾಮಗಾರಿಗಳನ್ನು ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಗ್ರಾಮೀಣ ನೀರು ಸರಬರಾಜು ಇಲಾಖೆಯ ಜಿಲ್ಲಾ ಕಾರ್ಯನಿರ್ವಾಹಕ ಎಂಜಿನಿಯರುಗಳಿಗೆ ಸೂಚನೆ ನೀಡಿದರು.

ಎಂಜನಿಯರುಗಳು ನಿಧಾನ ಪ್ರವೃತ್ತಿಯನ್ನು ಬಿಟ್ಟು, ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆಗಳನ್ನು ನಿರ್ದಿಷ್ಟ ಸಮಯದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ಆದ್ಯತೆ ನೀಡಬೇಕೆಂದು ಆದೇಶಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಗ್ರಾಮೀಣ ನೀರು ಸರಬರಾಜು ಇಲಾಖೆಯ ಜಿಲ್ಲಾ ಕಾರ್ಯನಿರ್ವಾಹಕ ಎಂಜಿನಿಯರುಗಳ ಸಭೆಯಲ್ಲಿ ಮಾತನಾಡಿದ ಸಚಿವರು ಏಕಗ್ರಾಮ ಹಾಗೂ ಬಹುಗ್ರಾಮ ನೀರು ಸರಬರಾಜು ಯೋಜನೆಯ ಕಾಮಗಾರಿಗಳು ಮುಕ್ತಾಯಗೊಂಡ ನಂತರ ಅಗೆದ ರಸ್ತೆಗಳನ್ನು ಯಥಾಸ್ಥಿತಿಗೆ ತರುತ್ತಿಲ್ಲವೆಂಬ ದೂರುಗಳು ಬಹಳಷ್ಟು ಬರುತ್ತಿದ್ದು, ಈ ಸಂಬಂಧದಲ್ಲಿ ಎಂಜನಿಯರುಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ ಸಚಿವರು ನೀರು ಸರಬರಾಜು ಕಾಮಗಾರಿ ಮುಗಿದ ನಂತರ ಆದ್ಯತೆಯ ಮೇಲೆ ರಸ್ತೆಗಳನ್ನು ಸರಿಪಡಿಸುವಲ್ಲಿ ಗಮನ ಹರಿಸಲು ಸೂಚಿಸಿದರು. ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವ ಮೊದಲು ಅವರಲ್ಲಿನ ಯಂತ್ರೋಪಕರಣಗಳು ಮುಂತಾದ ಸಾಮರ್ಥ್ಯವನ್ನು ಪರೀಕ್ಷಿಸಬೇಕೆಂದು ಸಚಿವರು ತಿಳಿಸಿದರು.

ಏಕಗ್ರಾಮ ಹಾಗೂ ಬಹುಗ್ರಾಮ ನೀರು ಸರಬರಾಜು ಯೋಜನೆಗಳಿಗೆ ಮಂಜೂರಾತಿ ಪಡೆದು, ಕಾರ್ಯಗತವಾಗುವ ಸಮಯದಲ್ಲಿ ಎದುರಾಗುವ ಅರಣ್ಯಭೂಮಿ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳ ಕಾರಣ ನೀಡಿ, ಯೋಜನೆಗಳನ್ನು ವೀಳಂಬ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಯೋಜನಾವರದಿ ಸಿದ್ಧಪಡಿಸುವಾಗಲೇ ಎದುರಾಗುವ ಅಡ್ಡಿ ಆತಂಕಗಳನ್ನು ಗಮನಿಸಬೇಕೆಂದು ಸಲಹೆ ಮಾಡಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಂಗಳಲ್ಲಿ ಮೂರು ದಿನ ಪಂಚಾಯತ್‌ ರಾಜ್‌, ಗ್ರಾಮೀಣ ನೀರು ಸರಬರಾಜು ಹಾಗೂ ನರೇಗಾ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಬೇಕು, ಜಿಲ್ಲಾ ಮಟ್ಟದಲ್ಲೇ ಸಿಇಒಗಳು ಸಮಸ್ಯೆಗೆ ಪರಿಹಾರ ಹುಡಕಬೇಕು ಎಂದೂ ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಇಡೀ ದಿನ ನಡೆದ ಸಭೆಯಲ್ಲಿ ಸಚಿವರು ಜಿಲ್ಲಾವಾರು ಪ್ರಗತಿಯನ್ನು ಪರಿಶೀಲಿಸಿ, ಕಡಿಮೆ ಪ್ರಗತಿ ಸಾಧಿಸಿದ ಎಂಜನಿಯರುಗಳ ಚಳಿ ಬಿಡಿಸಿದರಲ್ಲದೆ, ಸಾಕಷ್ಟು ಪ್ರಮಾಣದಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸುವಲ್ಲಿ ಆಲಸ್ಯ ತೋರುವ ಎಂಜನಿಯರುಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು, ನೀರು ಕಲುಷಿತಗೊಂಡು ಗ್ರಾಮಗಳಲ್ಲಿ ಸಮಸ್ಯೆ ತಲೆದೋರಿದಲ್ಲಿ ಎಂಜನಿಯರುಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಾರ್ವಜನಿಕರಿಂದ ಬರುವ ದೂರುಗಳನ್ನು ತಮ್ಮ ಮೇಜಿನಿಂದ ಕಳುಹಿಸಿದಲ್ಲಿ ಮಾತ್ರ ಸಮಸ್ಯೆ ಬಗೆಹರಿಯುವದಲ್ಲ, ದೂರನ್ನು ಪೂರ್ಣವಾಗಿ ಪರಿಹರಿಸುವ ಮೂಲಕ ಜನರ ಸಮಸ್ಯೆಗಳನ್ನು ದೂರ ಮಾಡಬೇಕು, ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಬರುವ ದೂರುಗಳನ್ನು ಅಂದೇ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಕ್ರಮ ಕೈಗೊಂಡು ಸೂಕ್ತ ಸ್ಪಷ್ಟನೆ ನೀಡಬೇಕೆಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯದರ್ಶಿ ಸಮೀರ್‌ ಶುಕ್ಲಾ, ಗ್ರಾಮೀಣ ನೀರು ಸರಬರಾಜು ಇಲಾಖೆಯ ನಿರ್ದೇಶಕ ಕೆ.ನಾಗೇಂದ್ರಪ್ರಸಾದ್‌ ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Tags:
error: Content is protected !!