ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಸೋಮವಾರ ಆರಂಭವಾದ ವಿಧಾನಸಭೆ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯ ಬೆಂಬಲಿಸಿ ಮಾತನಾಡಿದ ಅವರು, ಭೈರಪ್ಪ ಅವರ ಸ್ಮಾರಕ ನಿರ್ಮಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ಮುಂದಿನ ವರ್ಷದಿಂದ ಪರಿಸರ ಪ್ರಶಸ್ತಿ ನೀಡಲಾಗುವುದು ಎಂದರು.
ಸಾಲುಮರದ ತಿಮ್ಮಕ್ಕ ಅವರ ಗುಣಗಾನ ಮಾಡಿದ ಮುಖ್ಯಮಂತ್ರಿಯವರು, ಬೇಲೂರಿನಲ್ಲಿ ತಿಮಕ್ಕ ಅವರ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗುವುದು ಮತ್ತು ಮುಂದಿನ ವರ್ಷದಿಂದ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪರಿಸರ ಪ್ರಶಸ್ತಿ ಕೂಡ ನೀಡಲು ತೀರ್ಮಾನಿಸಲಾಗದೆ ಎಂದು ಹೇಳಿದರು.
ಇದನ್ನು ಓದಿ :ಸುವರ್ಣಸೌಧದಲ್ಲಿ ನಾಟಿ ಕೋಳಿ ಬಗ್ಗೆ ಸ್ವಾರಸ್ಯಕರ ಚರ್ಚೆ..!
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಸಾಲುಮರದ ತಿಮ್ಮಕ್ಕ ನಮ್ಮ ಜೊತೆ ಇಲ್ಲದೇ ಇರಬಹುದು. ಆದರೆ ಅವರು ಬೆಳೆಸಿದ ಮರಗಳು ನಮ್ಮ ನಡುವೆ ಸಾಕ್ಷಿ ಗುಡ್ಡೆಗಳಾಗಿವೆ. ಸರ್ಕಾರ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸುವುದು ಸ್ವಾಗತಾರ್ಹ. ಬೇಲೂರಿನಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಸಾಹಿತಿ ಎಸ್.ಎಲ್.ಭೈರಪ್ಪ ಕಡ್ಡಿ ಮುರಿದಂತೆ ಮಾತನಾಡುವ ನಿಷ್ಠುರವಾದಿಯಾಗಿದ್ದರು. ಅವರು ಬರೆದ ಸಾಹಿತ್ಯ ಇಂದು ಸಜ್ಜನಿಕೆ ಮತ್ತು ಸೃಜನಶೀಲತೆಗೆ ಹೆಸರುವಾಸಿಯಾಗಿವೆ. ಸಮಾಜದ ಆತ್ಮವಿಮರ್ಶೆಗೆ ಪ್ರೇರೇಪಣೆಯಾಗಿವೆ ಎಂದು ವಿವರಿಸಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್.ವೈ.ಮೇಟಿ ಅವರ ನಿಷ್ಠೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆರ್.ವಿ.ದೇವರಾಜ್ ಬೆಂಗಳೂರಿನಲ್ಲಿ ಕೆಲವು ಕ್ಷೇತ್ರಗಳ ಮೇಲೆ ಬಲವಾದ ಹಿಡಿತ ಹೊಂದಿದ್ದರು. ೨೦೦೪ರಲ್ಲಿ ಎಸ್.ಎಂ.ಕೃಷ್ಣ ಅವರಿಗೆ ತಾವು ಪ್ರತಿನಿಧಿಸಿದ್ದ ಚಾಮರಾಜಪೇಟೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಗಡಿಯ ಎಚ್.ಸಿ.ಬಾಲಕೃಷ್ಣ , ಕಾಂಗ್ರೆಸ್‌ನ ಜಿ.ಟಿ.ಪಾಟೀಲ್, ಸಿ.ಎಸ್.ಪಾಟೀಲ್, ಪಿ.ಎಂ.ನರೇಂದ್ರ ಸ್ವಾಮಿ, ಎನ್.ಟಿ.ಶ್ರೀನಿವಾಸ್, ಬಿಜೆಪಿಯ ಸಿದ್ದು ಸವದಿ, ಜಾತ್ಯತೀತ ಜನತಾದಳದ ಎಂ.ಟಿ.ಕೃಷ್ಣಪ್ಪ, ಬೇಲೂರಿನ ಸುರೇಶ್ ಮತ್ತಿತರರು ಅಗಲಿದ ಗಣ್ಯರ ಗುಣಗಾನ ಮಾಡಿದರು.





