Mysore
14
few clouds

Social Media

ಗುರುವಾರ, 22 ಜನವರಿ 2026
Light
Dark

ಜಾತಿಗಣತಿ ಸಮೀಕ್ಷೆ ಮೂಲಕ ಗ್ಯಾರಂಟಿ ಬಂದ್‌ ಮಾಡುವ ಸಂಚು: ಆರ್.‌ಅಶೋಕ್‌ ಆರೋಪ

R Ashok

ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ರಾಜ್ಯಾದ್ಯಂತ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಉದ್ದೇಶವೇ ಗ್ಯಾರಂಟಿಗಳನ್ನು ಕಡಿತ ಮಾಡುವ ಏಕೈಕ ಗುರಿಯಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತೆ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಈ ಹಿಂದೆ ನೀಡಿದ ಹೇಳಿಕೆಗೆ ಬದ್ದನಾಗಿದ್ದೇನೆ. ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಮೂಲಕ ಗ್ಯಾರಂಟಿಗಳನ್ನು ಬಂದ್ ಮಾಡಲು ಸಂಚು ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಜನರಿಗೆ ಗೊತ್ತಾಗಲಿದೆ ಎಂದು ಎಚ್ಚರಿಸಿದರು.

ಮಾಹಿತಿ ಪಡೆಯಲು ಬಲವಂತ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಆದರೆ ಇವರು ಜನರ ವೈಯಕ್ತಿಕ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ನ್ಯಾಯಾಲಯ ಹೇಳಿದಂತೆ ಸಮೀಕ್ಷೆ ನಡೆಯುತ್ತಿಲ್ಲ. ಇದು ಸಿದ್ದರಾಮಯ್ಯ ಅವರ ಸಮೀಕ್ಷೆ. ಗ್ಯಾರಂಟಿಗಳನ್ನು ಕಟ್ ಮಾಡಲು ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನು ಓದಿ: ರಾಜಕೀಯಕ್ಕಾಗಿ ಜಾತಿಗಣತಿ ಸಮೀಕ್ಷೆ: ಸಂಸದ ಯದುವೀರ್‌ ಒಡೆಯರ್‌

ಯಾವ ಪುರುಷಾರ್ಥಕ್ಕೆ ಹದಿನೈದೇ ದಿನ ನಿಗದಿ ಮಾಡಿದ್ದೀರಿ? ತರಬೇತಿ ಕೊಡದೇ ಸಮೀಕ್ಷೆಗೆ ಗಣತಿದಾರರನ್ನು ಕಳಿಸಿದ್ದಾರೆ. ಹದಿನೈದು ದಿನಗಳಲ್ಲಿ ಪ್ರಳಯ ಆಗುತ್ತಾ? ಕೇಂದ್ರದ ಗಣತಿಯನ್ನೂ ತಪ್ಪು ದಾರಿಗೆ ಎಳೆಯಲು ಈಗಿಂದಲೇ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ ಜಾತಿಗಳ ನಡುವೆ ಗೊಂದಲ ಸೃಷ್ಟಿಸುತ್ತಿದ್ದಾರೆ. ದುರುದ್ದೇಶ ಸ್ವಾರ್ಥ, ದುರುಳತನ ಇರುವ ಸಮೀಕ್ಷೆ ಇದು ಎಂದು ಕಿಡಿಕಾರಿದರು.

ಹಲವು ಜಾತಿ ಸಮುದಾಯಗಳು ಸಮೀಕ್ಷೆ ಅವೈಜ್ಞಾನಿಕ ಎನ್ನುತಿವೆ. ಸಮೀಕ್ಷೆಯಲ್ಲಿ ಭಾಗವಹಿಸುವುದು, ಬಿಡುವುದು ಜನರ ವಿವೇಚನೆಗೆ ಬಿಟ್ಟ ವಿಚಾರ. ಕೋರ್ಟ್ ಕೂಡ ಕಡ್ಡಾಯವಲ್ಲ ಎಂದೇ ಹೇಳಿದೆ. ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತಿರುವುದು ಸಂವಿಧಾನದ ಪ್ರಕಾರ. ಆದರೆ ರಾಜ್ಯ ಸರ್ಕಾರ ಮಾಡುತ್ತಿರುವುದು ಸಂವಿಧಾನ ಪ್ರಕಾರ ಅಲ್ಲ. ತೇಜಸ್ವಿ ಸೂರ್ಯ ಅವರು ತಮ ವೈಯಕ್ತಿಕ ಹೇಳಿಕೆ ನೀಡಿದ್ದಾರೆ.

ಕೋರ್ಟ್ ಪ್ರಕಾರ, ಇಷ್ಟವಿದ್ದರೆ ಮಾಹಿತಿ ಕೊಡಬಹುದು ಇಲ್ಲದಿದ್ದರೂ ಬಿಡಬಹುದು. ವೈಯಕ್ತಿಕ ಮಾಹಿತಿ ಕೊಡುವುದು, ಬಿಡುವುದು ಜನರ ತೀರ್ಮಾನ. ಎಲ್ಲ ಮಾಹಿತಿ ಕೊಟ್ಟರೆ ಸರ್ಕಾರದ ಸೌಲಭ್ಯಕ್ಕೆ ಕೊಕ್ ಬೀಳಬಹುದು.

ಸಿದ್ದರಾಮಯ್ಯನವರದ್ದು ಜಾತಿ ಒಡೆಯುವ ಬ್ರಾಂಡ್. 15 ದಿನದಲ್ಲೇ ಸರ್ವೆ ಮಾಡಬೇಕು ಎನ್ನುವ ಆತುರ ಏಕೆ ? 15 ದಿನದಲ್ಲಿ ಸಿಎಂ ಬಿಟ್ಟೋಗುತ್ತಾರಾ? ತರಬೇತಿ ಇಲ್ಲದೇ ಸರ್ವೆಗೆ ಹೋಗುತ್ತಿದ್ದಾರೆ. ನಾಯಿಯಿಂದ ಕಚ್ಚಿಸಿಕೊಂಡು ಬರಲು ಸರ್ವೆಗೆ ಹೋಗಬೇಕಾ? ಎಂದು ಪ್ರಶ್ನಿಸಿದರು.

Tags:
error: Content is protected !!