Mysore
23
scattered clouds

Social Media

ಶುಕ್ರವಾರ, 11 ಜುಲೈ 2025
Light
Dark

ಗ್ಯಾರಂಟಿಗಳಿಂದ ಕಾಂಗ್ರೆಸ್‌ ಮತ ಬಂದಿಲ್ಲ: ಆರ್‌.ಅಶೋಕ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳಿಂದ ಕಾಂಗ್ರೆಸ್‌ಗೆ ಮತ ಬಂದಿಲ್ಲ. ಸರ್ಕಾರ ಪಾಪರ್‌ ಆಗಿ ಅಭಿವೃದ್ಧಿ ಶೂನ್ಯವಾಗಿರುವುದರಿಂದಲೇ ಕಾಂಗ್ರೆಸ್‌ ಸೋತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಮತಕ್ಕಾಗಿ ಗ್ಯಾರಂಟಿ ಜಾರಿ ಮಾಡಿದ್ದರಿಂದ ಈಗ ಸಾಲ ಮಾಡಿ ಸಂಬಳ ಕೊಡುವ ಪರಿಸ್ಥಿತಿ ಬಂದಿದೆ. ಗ್ಯಾರಂಟಿಗಳಿಂದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಶಾಸಕರು ಅನುದಾನ ಯಾವಾಗ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಪಾಪರ್‌ ಆಗಿರುವ ಸರ್ಕಾರ ಎಲ್ಲ ಕಡೆ ಬಿಲ್‌ ಪಾವತಿ ಬಾಕಿ ಇರಿಸಿಕೊಂಡಿದೆ ಎಂದು ದೂರಿದರು.

ಬಿಜೆಪಿ ಸರ್ಕಾರವಿದ್ದಾಗ ಶಾಸಕರು ಶಾಲೆ, ಆಸ್ಪತ್ರೆ, ನೀರಾವರಿ ಯೋಜನೆ ತಂದರು. ಕಾಂಗ್ರೆಸ್‌ನ ಶಾಸಕರು ಏನೂ ತಂದಿಲ್ಲವೆಂದು ಜನರೇ ಹೀಯಾಳಿಸುತ್ತಿದ್ದಾರೆ. ಅಭಿವೃದ್ಧಿ ಇಲ್ಲದೆ ಜನರು ಶಾಸಕರು ಹಾಗೂ ಸಚಿವರ ಮಾತಿಗೆ ವಿರುದ್ಧವಾಗಿ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಸರ್ಕಾರ ದಲಿತರ ಹಣ ಲೂಟಿ ಹೊಡೆದು, ಶೂನ್ಯ ಸಾಧನೆ ಮಾಡಿ, ಜನರ ಪಾಲಿಗೆ ಸತ್ತುಹೋಗಿದೆ. ಒಬ್ಬ ಸಚಿವರೂ ಮಳೆ ಹಾನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸಚಿವರಿರುವ ಕಡೆ ಹಿನ್ನೆಡೆಯಾಗಿದ್ದು, ಸ್ಥಾನ ಕಳೆದುಕೊಳ್ಳುವ ಆತಂಕವಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಹೋದರ ಡಿ.ಕೆ.ಸುರೇಶ್‌ ಕನಕಪುರದಲ್ಲಿ ಹೀನಾಯವಾಗಿ ಸೋತಿದ್ದಾರೆ. ರಾಜ್ಯದಲ್ಲಿ ಸರ್ಕಾರವಿದ್ದು, ಏಕೆ ಸೋತಿದ್ದೀರಿ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. ದಲಿತರ 187 ಕೋಟಿ ರೂ. ಲೂಟಿ ಮಾಡಿದ್ದರಿಂದಲೇ ಇವರು ಸೋತಿದ್ದಾರೆ ಎಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ತಿಳಿದುಬಂದಿದೆ. ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಸರ್ಕಾರ ಮೂಲೆ ಸೇರಿದೆ  ಎಂದು ಹೇಳಿದರು.

 

Tags:
error: Content is protected !!