ಬೆಂಗಳೂರು : ರಾಜ್ಯ ಸರ್ಕಾರದಲ್ಲಿ ಉಂಟಾಗಿರುವ ನಾಯಕತ್ವ ಬದಲಾವಣೆ ಗೊಂದಲ ಶೀಘ್ರವಾಗಿ ಪರಿಹಾರ ಕಾಣದಿದ್ದರೆ ಪ್ರತಿಪಕ್ಷ ಬಿಜೆಪಿ, ರಾಜ್ಯಪಾಲರಿಗೆ ಹೆಹಲಿಗೆ ತೆರಳಿ ದೂರು ನೀಡಲು ಮುಂದಾಗಿದೆ.
ಇನ್ನು ೩-೪ ದಿನಗಳವರೆಗೆ ಇದೇ ಪರಿಸ್ಥಿತಿ ಮುಂದುವರಿದರೆ, ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಬಿಜೆಪಿ ಮನವಿ ಮಾಡಲಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್‌ನ ವಿರೋಧದ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮಧ್ಯಪ್ರವೇಶಕ್ಕೆ ಮನವಿ ಮಾಡಿಕೊಳ್ಳಲಿದೆ.
ಇದನ್ನು ಓದಿ: ಮೊದಲ ಬಾರಿಗೆ ಹೇಳಿಕೆ ಬದಲಿಸಿದ ಸಿಎಂ : ಹೈಕಮಾಂಡ್ ಸೂಚಿಸಿದರೆ ಮುಂದುವರಿಯುವೆ ಎಂದ ಸಿದ್ದರಾಮಯ್ಯ
ಕಳೆದ ೧೦ ದಿನಗಳಿಂದ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಜನರ ಕಷ್ಟಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕೆಲವು ಕಡೆ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ. ಬೆಂಗಳೂರಿನಂತಹ ಮಹಾನಗರದಲ್ಲೇ ಜನ ನಿಬಿಡ ಪ್ರದೇಶದಲ್ಲೇ ಎಟಿಎಂಗೆ ತುಂಬಬೇಕಾಗಿದ್ದ ಹಣವನ್ನು ದೋಚುತ್ತಾರೆ ಎಂದರೆ ಯಾರಿಗೂ ಕಾನೂನಿನ ಭಯವೇ ಇಲ್ಲದಂತಾಗಿದೆ. ಹೀಗಾಗಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಸರ್ಕಾರಕ್ಕೆ ಸ್ಪಷ್ಟವಾದ ನಿರ್ದೇಶನ ನೀಡುವಂತೆ ಕೋರಲಿದ್ದಾರೆ.
ಈಗಾಗಲೇ ರಾಜ್ಯಪಾಲರ ಭೇಟಿಗೆ ಅಧಿಕಾರಿಗಳಿಂದ ಸಮಯವಕಾಶವನ್ನು ನಿಗದಿಪಡಿಸುವಂತೆ ಬಿಜೆಪಿ ಮನವಿ ಮಾಡಿದೆ ಎಂದು ಗೊತ್ತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ನಡುವೆ ಅಧಿಕಾರಕ್ಕಾಗಿ ಪ್ರತಿದಿನ ಕಿತ್ತಾಟ ನಡೆಯುತ್ತಿದೆ. ಸಚಿವರು ತಮ್ಮ ಜವಾಬ್ದಾರಿಗಳನ್ನು ಮರೆತು ಕುರ್ಚಿ ಉಳಿಸಿಕೊಳ್ಳುವ ನೆಪದಲ್ಲಿ ಇಲಾಖೆಯ ಕೆಲಸವನ್ನು ಮರೆತಿದ್ದಾರೆ. ಇದರ ಪರಿಣಾಮವಾಗಿ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕಾದ ಅಗತ್ಯವಿದೆ ಎಂದು ಮನವಿಯಲ್ಲಿ ಮನವರಿಕೆ ಮಾಡಿಕೊಡಲಿದೆ.





