ಬೆಂಗಳೂರು: ದೇಶದ ಐಕ್ಯತೆ ಹಾಗೂ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ನಮ್ಮ ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ತೀರ್ಮಾನ ಮಾಡಿದೆ. ಪಕ್ಷದ ಕಾರ್ಯಕಾರಿ ಸಮಿತಿ ನಿರ್ಣಯ ಕೈಗೊಂಡಿದ್ದು, ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದರು. ದೇಶದ ಐಕ್ಯತೆ, ಶಾಂತಿ, ಸಮಗ್ರತೆ ಮುಖ್ಯ. ಪ್ರತಿಯೊಬ್ಬರ ಪ್ರಾಣವೂ ಮುಖ್ಯ. ನಾವೆಲ್ಲರೂ ಭಾರತೀಯರು ಎಂದರು.
ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಬೇಕಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಅವರೇ ಉತ್ತರ ಕೊಡಬೇಕು. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‍ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ನೀಡಿರುವ ಹೇಳಿಕೆಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದರು.



