ಬೆಂಗಳೂರು : ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣವೆಂದು ಶಂಕಿಸಲಾಗಿರುವ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಕೋಲ್ಡ್ರಿಫ್ ಕಾಫ್ ಸಿರಪ್ ಅನ್ನು ಕರ್ನಾಟಕ ರಾಜ್ಯದಲ್ಲೂ ನಿಷೇಧ ಮಾಡಲಾಗಿದೆ.
ಕರ್ನಾಟಕ ಫಾರ್ಮಾ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆ (ಕೆಎಫ್‌ಆರ್‌ಡಿಎ) ಎಲ್ಲ ಸಗಟು ಮಾರಾಟಗಾರರ, ಔಷಧ ವ್ಯಾಪಾರಿಗಳು ಮತ್ತು ವಿತರಕರುಗಳಿಗೆ ಪತ್ರ ಬರೆದಿದ್ದು, ಕೋಲ್ಡ್ರಿಫ್ ಕಾಫ್ ಸಿರಪ್ ಮಾರಾಟ ಮಾಡದಂತೆ ಸೂಚನೆ ನೀಡಿದೆ. ಜೊತೆಗೆ ಡೈಎಥಿಲೀನ್ ಗ್ಲೈಕಾಲ್ ಕಂಟೇಟ್ ಕಾಫ್ ಸಿರಪ್ ತಡೆಗೂ ಸೂಚಿಸಲಾಗಿದೆ.
ಇದನ್ನೂ ಓದಿ:-ರಾಜ್ಯದಲ್ಲೂ ಕೋಲ್ಡ್ರಿಫ್ ಸಿರಪ್ ನಿಷೇಧ!
ಕೋಲ್ಡ್ರಿಫ್ ಕಾಫ್ ಸಿರಪ್ ಅನ್ನು ಕರ್ನಾಟಕದಲ್ಲಿ ಮಾತ್ರವಲ್ಲ ತಮಿಳನಾಡಿನಲ್ಲೂ ನಿಷೇಧ ಮಾಡಲಾಗಿದೆ. ಎಲ್ಲಾ ಸ್ಟಾಕ್‌ಗಳನ್ನೂ ತಕ್ಷಣವೇ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಮುಂದಿನ ಸರ್ಕಾರದ ಆದೇಶದವರೆಗೆ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಕಾಫ್ ಸಿರಫ್ ಮಾರಾಟ ಮಾಡದಂತೆ ತಿಳಿಸಲಾಗಿದ್ದು, ಕರ್ನಾಟಕದಲ್ಲಿ ಈಗಾಗಲೇ ಮಾರಾಟಗೊಂಡಿರುವ ಕೋಲ್ಡ್ರಿಫ್ ಸಿರಪ್‌ನ ಪ್ರಸ್ತುತ ಸ್ಟಾಕ್ ವಿವರಗಳನ್ನು ಡ್ರಗ್ಸ್ ಕಂಟ್ರೋಲ್ ಇಲಾಖೆಗೆ ಕಳುಹಿಸುವಂತೆ ಸೂಚನೆ ನೀಡಲಾಗಿದೆ.
ಮಕ್ಕಳ ಸಾವುಗಳ ಬೆನ್ನಲ್ಲೇ ಕಾಫ್ ಸಿರಪ್ ಬಳಕೆ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ಎರಡು ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡದಂತೆ ವೈದ್ಯರಿಗೆ ಸೂಚನೆ ನೀಡಿದೆ.





