ಬೆಂಗಳೂರು: ಶಾಸಕರ ಅಸಮಾಧಾನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಗೆಹರಿಸುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಚಿವರ ವಿರುದ್ಧ ಶಾಸಕರ ಅಸಮಾಧಾನ ಎಲ್ಲಾ ಸರ್ಕಾರಗಳಲ್ಲೂ ಸಾಮಾನ್ಯ. ಶಾಸಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದು ಕಷ್ಟ ಸಾಧ್ಯ. ಹಾಗಾಗಿ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಮುಖ್ಯಮಂತ್ರಿಯವರು ಶಾಸಕರ ಜೊತೆ ಚರ್ಚೆ ಮಾಡಿ ಬಗೆಹರಿಸುತ್ತಾರೆ ಎಂದರು.
ಈ ಮೊದಲು ಶಾಸಕಾಂಗ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಶಾಸಕರಿಗೆ ಅವಕಾಶ ನೀಡಲಾಗಿತ್ತು. ಸಾಕಷ್ಟು ಚರ್ಚೆಗಳೂ ಆಗಿವೆ. ಇದೆಲ್ಲಾ ಸಣ್ಣಪುಟ್ಟ ಸಮಸ್ಯೆ, ಬಗೆಹರಿಯುತ್ತದೆ. ಹೈಕಮಾಂಡ್ ಮುಖ್ಯಮಂತ್ರಿಯವರಿಗೆ ಯಾವ ರೀತಿಯ ಸೂಚನೆ ನೀಡಿದೆಯೋ ಗೊತ್ತಿಲ್ಲ. ಒಂದು ವೇಳೆ ಸೂಚನೆ ನೀಡಿದ್ದರೆ ಅದರಂತೆ ನಡೆದುಕೊಳ್ಳುತ್ತಾರೆ ಎಂದರು.
ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಅದು ರಾಜ್ಯದ ಸಮಸ್ಯೆ ಅಲ್ಲ. ಕ್ಷೇತ್ರದ ಅಭಿವೃದ್ಧಿಗೆ ಪ್ರತಿಯೊಂದಕ್ಕೂ ತಲಾ 50 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗುತ್ತವೆ ಎಂದು ತಿಳಿಸಿದರು.





