ಬೆಂಗಳೂರು: ಹೈಕಮಾಂಡ್ ಯಾರನ್ನೇ ಮುಖ್ಯಮಂತ್ರಿ ಮಾಡಿದ್ದರೂ ನಾವೆಲ್ಲಾ ಅವರಿಗೆ ಜೈ ಎನ್ನುತ್ತೇವೆ. ಸದ್ಯಕ್ಕೆ ಮುಖ್ಯಮಂತ್ರಿಯ ಹುದ್ದೆಯ ಸ್ಪರ್ಧೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮೊದಲ ಸ್ಥಾನದಲ್ಲಿದ್ದಾರೆ, ನಾವು ಎರಡನೇ ಸ್ಥಾನದಲ್ಲಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಅಧಿಕಾರಕ್ಕೆ ಬಂದಾಗ ಶಾಸಕರ ಅಭಿಪ್ರಾಯ ಪಡೆದು, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಯಾರಿಗೆ ಹೆಚ್ಚಿನ ಬೆಂಬಲವಿದೆಯೋ ಅವರು ಮುಖ್ಯಮಂತ್ರಿಯಾಗುತ್ತಾರೆ. ಎಸ್.ಎಂ ಕೃಷ್ಣ, ಸಿದ್ದರಾಮಯ್ಯ ಅವರನ್ನು ಇದೇ ರೀತಿ ಆಯ್ಕೆ ಮಾಡಲಾಗಿದೆ ಎಂದರು.
ಇದನ್ನು ಓದಿ : ಆರ್‌ಎಸ್‌ಎಸ್ ಬ್ಯಾನ್ ಅಂತಾ ನಾನು ಹೇಳಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ
ಒಂದು ವೇಳೆ ಶಾಸಕರ ಅಭಿಪ್ರಾಯ ಪಡೆಯುವುದಿಲ್ಲ, ನೇರವಾಗಿ ಮುಖ್ಯಮಂತ್ರಿ ಮಾಡುತ್ತೇವೆ ಎಂದರೆ ಹೈಕಮಾಂಡ್‍ನ ತೀರ್ಮಾನಕ್ಕೆ ನಾವು ಬದ್ದರಾಗಿರುತ್ತೇವೆ. ಯಾರನ್ನೇ ಮುಖ್ಯಮಂತ್ರಿ ಮಾಡಿದರೂ ಒಪ್ಪಿಕೊಳ್ಳುತ್ತೇವೆ.
ಮುಖ್ಯಮಂತ್ರಿ ಹುದ್ದೆ ರೇಸಿನಲ್ಲಿ ನಾನು ಎರಡನೇ ಸ್ಥಾನದಲ್ಲಿದ್ದೇನೆ. ನಾನೇಕೆ ಮುಖ್ಯಮಂತ್ರಿಯಾಗಬಾರದು ಎಂದು ಸಹಜವಾಗಿ ಕೇಳಿದ್ದೇನೆ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ಬಹಳಷ್ಟು ಮಂದಿ ಆಕಾಂಕ್ಷಿಗಳು ಇದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ಅವರ ಮನೆಯಲ್ಲಿ ಔತಣಕೂಟ ಆಯೋಜಿಸಿದ್ದಾರೆ. 6 ತಿಂಗಳಿಗೊಮ್ಮೆ, 3 ತಿಂಗಳಿಗೊಮ್ಮೆ ಅಥವಾ ಅಧಿವೇಶನದ ವೇಳೆ ಊಟಕ್ಕೆ ಕರೆಯುವುದು ಸಂಪ್ರದಾಯವಾಗಿದೆ. ಇದೇನು ದೊಡ್ಡ ವಿಷಯವಲ್ಲ. ಅಧಿಕಾರ ಹಂಚಿಕೆ ಅಥವಾ ಸರ್ಕಾರಕ್ಕೆ ಎರಡೂವರೆ ವರ್ಷ ಆಗಿರುವ ಹಿನ್ನೆಲೆಯಲ್ಲಿ ಔತಣಕೂಟ ಆಯೋಜಿಸಲಾಗಿದೆ ಎಂಬುದು ಸರಿಯಲ್ಲ ಎಂದರು.





