Mysore
29
few clouds

Social Media

ಗುರುವಾರ, 29 ಜನವರಿ 2026
Light
Dark

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮೆಕ್ಕೆಜೋಳ ಮತ್ತು ಹೆಸರುಬೇಳೆ ಬೆಲೆಗಳು ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿತವಾಗಿದ್ದು, ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯ ಪ್ರವೇಶ ಮಾಡಿ, ಬೆಂಬಲ ಬೆಲೆಯಲ್ಲಿ ಕೂಡಲೇ ಖರೀದಿ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರ ಬರೆದಿರುವ ಮುಖ್ಯಮಂತ್ರಿಯವರು, ಕರ್ನಾಟಕದಲ್ಲಿ 17.94 ಲಕ್ಷ ಹೆಕ್ಟೇರ್ ನಲ್ಲಿ 54.74 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು, 4.16 ಲಕ್ಷ ಹೆಕ್ಟೇರ್ ನಲ್ಲಿ 1.983 ಲಕ್ಷ ಮೆಟ್ರಿಕ್ ಟನ್ ಹೆಸರು ಕಾಳು ಉತ್ಪಾದನೆಯಾಗುವ ಅಂದಾಜಿದೆ.

ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 2,400 ಬೆಂಬಲ ಬೆಲೆ ನಿಗದಿಪಡಿಸಿದ್ದರೆ, ಮಾರುಕಟ್ಟೆಯಲ್ಲಿ 1,600 ರಿಂದ 1,800 ರೂಪಾಯಿಗಳಷ್ಟೇ ಬೆಲೆ ಇದೆ. ಹೆಸರುಕಾಳಿಗೆ 8,768 ರೂಪಾಯಿ ದರ ನಿಗದಿಯಾಗಿದ್ದರೆ, 5,400 ಮಾತ್ರ ಮಾರುಕಟ್ಟೆ ದರ ಇದೆ ಎಂದು ಹೇಳಿದರು.

ಈ ಉತ್ಪನ್ನಗಳಿಗೆ ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಇತ್ತು. ಈ ಬಾರಿ ಅಸಹಜ ಬೆಳವಣಿಗೆಗಳಿಂದ ದರ ಕುಸಿತವಾಗಿದೆ ಎಂದು ವಿವರಿಸಿದ್ದಾರೆ.

ಕರ್ನಾಟಕದಲ್ಲಿ ಪ್ರಸ್ತುತ 32 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಮಾರುಕಟ್ಟೆಯಲ್ಲಿ ಖರೀದಿಯಾಗದೆ ಉಳಿಯುವ ಅಂದಾಜಿದೆ. ಕೇಂದ್ರ ಸರ್ಕಾರ ಕೂಡಲೇ ಎನ್.ಎ.ಎಫ್.ಇ.ಡಿ, ಎಫ್.ಸಿ.ಐ ಮತ್ತು ಎನ್.ಸಿ.ಸಿ.ಎಫ್ ಸಂಸ್ಥೆಗಳಿಂದ ಖರೀದಿ ಕೇಂದ್ರಗಳನ್ನು ಆರಂಭಿಸಿ ಮೆಕ್ಕೆಜೋಳ ಮತ್ತು ಹೆಸರುಕಾಳನ್ನು ಖರೀದಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೆಕ್ಕೆಜೋಳದ ಎಥೆನಾಲ್ ಉತ್ಪಾದಿಸಲು ಪ್ರತಿ ಲೀಟರ್ ಗೆ 66.07 ರೂಪಾಯಿ ಖರ್ಚಾಗಲಿದೆ. ಜೊತೆಗೆ ಜಿಎಸ್‍ಟಿ ಹೊರತಾಗಿ 5.79 ರೂ. ವಿಶೇಷ ರಿಯಾಯಿತಿ ಸಿಗುತ್ತಿದೆ.

ಕರ್ನಾಟಕದಲ್ಲಿ ಇರುವ 49 ಡಿಸ್ಟಲರಿಗಳು 272 ಲೀಟರ್ ಎಥೆನಾಲ್ ಉತ್ಪಾದಿಸುವ ಸಾಮಥ್ರ್ಯ ಹೊಂದಿವೆ. 2025-26ನೇ ಸಾಲಿಗೆ ದೇಶಾದ್ಯಂತ 1050 ಕೋಟಿ ಲೀಟರ್ ಎಥೇನಾಲ್ ವಹಿವಾಟನ್ನು ದೃಢಿಕರಿಸಲಾಗಿದೆ. ಇದರಲ್ಲಿ 478 ಕೋಟಿ ಲೀಟರ್ ಎಥೇನಾಲ್, ಮೆಕ್ಕೆಜೋಳದಿಂದಲೇ ಉತ್ಪಾದನೆಯಾಗುತ್ತಿದೆ. ಕರ್ನಾಟಕದಲ್ಲಿನ ಡಿಸ್ಟಲರಿಗಳಲ್ಲಿ ಲಭ್ಯ ಸಾಮರ್ಥ್ಯದಷ್ಟು ಎಥೇನಾಲ್ ಖರೀದಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿಲ್ಲ. ರಾಜ್ಯದಿಂದ ಪೂರೈಸಲಾಗುವ ಎಥೇನಾಲ್ ಸಾಮಥ್ರ್ಯವನ್ನು ಹೆಚ್ಚಿಸಬೇಕು. ಡಿಸ್ಟಲರಿ ಘಟಕಗಳು ಮಧ್ಯವರ್ತಿಗಳು ಮತ್ತು ವ್ಯಾಪಾರಿಗಳನ್ನು ಹೊರತು ಪಡಿಸಿ ನೇರವಾಗಿ ರೈತರಿಂದ ಅಥವಾ ರೈತರ ಕೃಷಿ ಉತ್ಪಾದನಾ ಸಂಘಟನೆಗಳಿಂದ ಮೆಕ್ಕೆಜೋಳ ಖರೀದಿಸಲು ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ಕಳೆದ ವರ್ಷ ಮ್ಯಾನಾರ್, ಉಕ್ರೇನ್ ದೇಶಗಳಿಂದ ಭಾರೀ ಪ್ರಮಾಣದ ಮೆಕ್ಕೆಜೋಳವನ್ನು ಆಮದು ಮಾಡಿಕೊಂಡಿದೆ. ಇದು ಬೆಲೆ ಕುಸಿತಕ್ಕೆ ಮೂಲ ಕಾರಣ ಎಂದು ಆರೋಪಿಸಿದ್ದಾರೆ.

ಹೆಸರು ಕಾಳು ಬೆಳೆ ಪ್ರಕೃತಿ ವಿಕೋಪಕ್ಕೆ ಸಿಲುಕಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರಕೃತಿಯ ಅವಘಡಕ್ಕೆ ರೈತರಿಗೆ ತೊಂದರೆ ಆಗುವುದನ್ನು ಸಹಿಸಬಾರದು. ಕೂಡಲೇ ಹೆಸರುಕಾಳು ಖರೀದಿಯ ನಿಯಮಾವಳಿಗಳನ್ನು ಸರಳೀಕರಣಗೊಳಿಸಬೇಕು ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಮಾಡಬೇಕು ಎಂದು ಮುಖ್ಯಮಂತ್ರಿ ಆಗ್ರಹಿಸಿದ್ದಾರೆ.

Tags:
error: Content is protected !!