ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ನಟ ಶಿವರಾಜ್ ಕುಮಾರ್ ಅವರ ನಾಗವಾರದಲ್ಲಿನ ನಿವಾಸಕ್ಕೆ ಭೇಟಿಯಾಗಿ ಆರೋಗ್ಯವನ್ನು ವಿಚಾರಿಸಿದ್ದಾರೆ.
ಈ ಕುರಿತು ಇಂದು(ಜನವರಿ.27) ನಟ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ, ಆರೋಗ್ಯವನ್ನು ವಿಚಾರಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ಶಿವರಾಜ್ ಕುಮಾರ್ ಅವರ ಶಸ್ತ್ರಚಿಕಿತ್ಸೆಯ ನಂತರ ಅಮೆರಿಕಾದಿಂದ ನಿನ್ನೆ ತಾನೇ ತಮ್ಮ ನಿವಾಸಕ್ಕೆ ಹಿಂತಿರುಗಿದ್ದಾರೆ. ಆದರೆ ನಾನು ಶಸ್ತ್ರ ಚಿಕಿತ್ಸೆಯ ಮರುದಿನವೇ ಅವರಿಗೆ ಕರೆ ಮಾಡಿ ಆರೋಗ್ಯವನ್ನು ವಿಚಾರಿಸಿದಾಗ, ಅವರು ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದರು. ಹೀಗಾಗಿ ನಾನು ಇಂದು ಅವರ ಆರೋಗ್ಯವನ್ನು ವಿಚಾರಿಸಲು ಭೇಟಿ ನೀಡಿದ್ದೇನೆ ಎಂದರು.
ಈ ವೇಳೆ ಶಿವರಾಜ್ ಕುಮಾರ್ ಅವರು ಮುಂದಿನ ತಿಂಗಳಿನಿಂದ ಚಿತ್ರೀಕರಣಕ್ಕೆ ತೆರಳುತ್ತೇನೆ ಎಂದಿದ್ದಾರೆ. ಅಲ್ಲದೇ ನನಗೆ ಶಿವರಾಜ್ ಕುಮಾರ್ ಅವರು ಮತ್ತೆ ಹಿಂದಿನಂತೆ ಕ್ರಿಯಾಶೀಲರಾಗಿರುವುದು ಕಂಡು ಖುಷಿಯಾಯಿತು. ಜೊತೆಗೆ ಅಭಿಮಾನಿಗಳ ಹರಕೆ-ಹಾರೈಕೆ, ಆತ್ಮಬಲದಿಂದ ಅನಾರೋಗ್ಯವನ್ನು ಗೆದ್ದು ಬಂದಿರುವ ಅವರಿಗೆ ಮುಂದಿನ ಜೀವನ ಸುಖ-ಶಾಂತಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.