ಬೆಂಗಳೂರು: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಕೂಗು ಎದ್ದಿದೆ.
ಒಂದೆಡೆ ಸಿಎಂ ಸಿದ್ದರಾಮಯ್ಯ ಬದಲಾವಣೆ ಆಗಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದ್ದು, ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಮಾತುಗಳು ಕೂಡ ಗುಸು ಗುಸು ಎನ್ನುತ್ತಿವೆ.
ಇದೆಲ್ಲದರ ಜೊತೆಗೆ ಹೆಚ್ಚುವರಿ ಡಿಸಿಎಂಗಳ ನೇಮಕ ಮಾಡಬೇಕು ಎಂಬ ಬಗ್ಗೆಯೂ ಆಡಳಿತರೂಢ ಕಾಂಗ್ರೆಸ್‌ನಲ್ಲೇ ಆಗ್ರಹ ಕೇಳಿ ಬಂದಿದೆ. ಈಗ ದೆಹಲಿ ಮಟ್ಟದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಜೊತೆಗೆ ತನ್ನ ಆಪ್ತರಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗಾದಿ ಕೊಡಿಸಲು ಸಿಎಂ ಸಿದ್ದರಾಮಯ್ಯ ಭಾರೀ ಷಡ್ಯಂತ್ರ ರೂಪಿಸಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಒಲವು ತೋರಿರುವ ಹಿನ್ನೆಲೆಯಲ್ಲಿ ತನ್ನ ಆಪ್ತರಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ತಮ್ಮ ಆಪ್ತ ಬಣದಲ್ಲಿ ಗುರುತಿಸಿಕೊಂಡ ಸಚಿವರ ಹೆಸರನ್ನು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಮುಂದೆ ಇರಿಸಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ತಮ್ಮ ಆಪ್ತ ಸಚಿವರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಹಾಗೂ ಈಶ್ವರ್ ಖಂಡ್ರೆ ಪೈಕಿ ಯಾರಾದರೂ ಒಬ್ಬರ ಹೆಸರನ್ನು ಪ್ರಸ್ತಾಪಿಸಲು ಸಿಎಂ ಸಿದ್ದು ಒಲವು ತೋರಿಸಿದ್ದಾರೆ ಎನ್ನಲಾಗಿದೆ.
ಒಂದೊಂದು ಕೋಟಾದ ಒಬ್ಬೊಬ್ಬ ಸಚಿವರ ಹೆಸರು ಪ್ರಸ್ತಾಪಿಸಲು ಸಿದ್ದರಾಮಯ್ಯ ಸಕತ್ ಪ್ಲಾನ್ ರೂಪಿಸಿದ್ದು, ಅಹಿಂದ ಕೋಟಾದಡಿ ಸಚಿವ ಸತೀಶ್ ಜಾರಕಿಹೊಳಿ, ವೀರಶೈವ ಲಿಂಗಾಯತ ಕೋಟಾದಡಿ ಸಚಿವ ಎಂ.ಬಿ.ಪಾಟೀಲ್ ಅಥವಾ ಸಚಿವ ಈಶ್ವರ್ ಖಂಡ್ರೆ ಹೆಸರನ್ನು ಶಿಫಾರಸ್ಸು ಮಾಡಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಈಗ ಎಲ್ಲೆಡೆ ಹರಿದಾಡುತ್ತಿದೆ.