ಮೈಸೂರು: ಇಂದಿನ ಕಾಲದಲ್ಲಿ ಡಾಕ್ಟರ್, ಎಂಜಿನಿಯರಿಂಗ್ ಓದಿ ವಿದ್ಯಾವಂತರಾದರೂ ಕಂದಾಚಾರ ಮಾಡೋದನ್ನು ಮಾತ್ರ ಬಿಡುವುದಿಲ್ಲ. ಇಂತಹವರಿಗೆ ಶಿಕ್ಷಣ ಬೇಕಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಗರದಲ್ಲಿ ಇಂದು(ನ.22) ಸಿದ್ದಾರ್ಥ ಎಜುಕೇಷನ್ ಸೊಸೈಟಿಯ ಮೈಸೂರಿನ ಕ್ವೆಸ್ಟ್ ಅಕಾಡೆಮಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯದ ಬಸವಣ್ಣನವರು ಅಂದಿನ ಕಾಲದಲ್ಲೇ ಕರ್ಮ ಸಿದ್ಧಾಂತ ತಿರಸ್ಕರಿಸಿದ್ದರು. ಆದರೆ ಇದೀಗ ಬಸವಣ್ಣನವರ ಹೆಸರಲ್ಲೇ ಕರ್ಮಸಿದ್ಧಾಂತ ಪಾಲಿಸುವವರಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ವಿದ್ಯಾವಂತರಿಗೆ ಕೇವಲ ಶಿಕ್ಷಣ ಸಿಕ್ಕರೆ ಸಾಲದು, ವೈಜ್ಞಾನಿಕತೆ ಹಾಗೂ ವೈಚಾರಿಕತೆಯನ್ನು ತಿಳಿದುಕೊಳ್ಳಬೇಕು. ಇವೆರಡೂ ಇಲ್ಲದಿರುವ ಶಿಕ್ಷಣದಿಂದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ವಿಕಾಸ ಆಗಲು, ಸ್ವಾಭಿಮಾನಿಗಳಾಗಲು ಶಿಕ್ಷಣ ಅತ್ಯಗತ್ಯವಾಗಿದೆ. ಅನೇಕರು ಶಿಕ್ಷಣ ಪಡೆದಿರುತ್ತಾರೆ , ಆದರೆ ಅವರಲ್ಲಿ ಸಾಮಾಜಿಕ ಸ್ಪಂದನೆ, ಮಾನವೀಯ ಸ್ಪಂದನೆ ಇರುವುದಿಲ್ಲ. ಶಿಕ್ಷಣ ಕಲಿತೂ ಜಾತಿವಾದಿಗಳಾಗಿ ಮತ್ತು ಧಾರ್ಮಿಕ ತಾರತಮ್ಯ ಪಾಲಿಸೋದು ಮಾಡಿದರೆ ಅಂತಹ ಶಿಕ್ಷಣದಿಂದ ಏನು ಪ್ರಯೋಜನ. ಕೆಲವರು ಮಾತ್ರ ಸಮಾಜದ ಸವಲತ್ತುಗಳನ್ನು ಅನುಭವಿಸಬೇಕಾ? ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಈ ಸವಲತ್ತುಗಳು ಸಿಗಬೇಕು ಎಂದು ಹೇಳಿದರು.
ನಮ್ಮ ಜಾತಿಯವರಿಗೆ ವೋಟು ನೀಡಿ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಈಗಿನ ಕಾಲದಲ್ಲಿ ಹೇಳಿಕೊಳ್ಳೋಕೆ ಮಾತ್ರ ವಿದ್ಯಾವಂತರಾಗಿರುತ್ತಾರೆ. ಆದರೆ ಅವನು ನಮ್ಮ ಜಾತಿಯವನಲ್ಲ, ಅವನಿಗೆ ವೋಟು ನೀಡುವುದು ಬೇಡ. ಇವರು ನಮ್ಮ ಜಾತಿಯವರು ಇವರಿಗೆ ವೋಟು ನೀಡಿ ಎಂದು ಕೇಳುತ್ತಾರೆ. ಎಷ್ಟೇ ವಿದ್ಯಾವಂತ ವ್ಯಕ್ತಿಯಾಗಿದ್ದರೂ ಜಾತಿಯನ್ನು ನೋಡುತ್ತಾರೆ. ಅವರಿಗೆ ರಾಜಕೀಯ ರಾಜಕೀಯ ಪ್ರಜ್ಞೆ , ತಿಳಿವಳಿಕೆ ಇದೆಯೊ, ಇಲ್ವೋ ಗೊತ್ತಿಲ್ಲ. ಕಾಳಜಿ ಇದೆಯೋ, ಇಲ್ವೋ ಗೊತ್ತಿಲ್ಲ. ಜಾತಿ ನೋಡು, ವೋಟು ಹಾಕು ಅಷ್ಟೆ. ಇದಕ್ಕೆ ವಿದ್ಯೆ ಕಲಿಬೇಕಾ ಎಂದು ವ್ಯಂಗ್ಯವಾಡಿದ್ದಾರೆ.