ಬೆಂಗಳೂರು : ಐದು ವರ್ಷ ತಾವೇ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುವುದಾಗಿ ಪದೇ ಪದೇ ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೇ ಮೊದಲ ಬಾರಿಗೆ ಹೇಳಿಕೆ ಬದಲಿಸಿದ್ದು, ಹೈಕಮಾಂಡ್ ಸೂಚನೆ ನೀಡಿದರೆ, ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎನ್ನುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರ ಹೇಳಿಕೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಮುನ್ಸೂಚನೆ ನೀಡಿದೆ. ಎರಡೂವರೆ ವರ್ಷದ ಬಳಿಕ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಚರ್ಚೆಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಇದನ್ನು ಓದಿ: ಡಿಕೆಶಿಗೆ ಸಿಎಂ ಸ್ಥಾನ ನೀಡಲು ಆಗ್ರಹ : ಮದ್ದೂರಿನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಒಕ್ಕಲಿಗರು
ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನಾವು ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ. ನಮ್ಮಲ್ಲಿರುವ ಹೈಕಮಾಂಡ್ ತೀರ್ಮಾನ ಮಾಡಿದರೆ ಅದಕ್ಕೆ ಬದ್ಧವಾಗಿರುತ್ತೇವೆ. ನೀವೇ ಮುಂದುವರಿಯಿರಿ ಎಂದರೆ ಮುಂದುವರಿಯುತ್ತೇನೆ. ಅಂತಿಮವಾಗಿ ಹೈಕಮಾಂಡ್ ಹೇಳಿದಂತೆ ನಾನು ಮತ್ತು ಡಿ.ಕೆ. ಶಿವಕುಮಾರ್ ಇಬ್ಬರು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆಯೇ? ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದ ಮೇಲೂ ಪುನಃ ಇದೇ ರೀತಿಯ ಪ್ರಶ್ನೆ ಕೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ೪-೫ ತಿಂಗಳ ಹಿಂದೆ ಸಂಪುಟ ಪುನಾರಚನೆ ಮಾಡುವ ಸಲುವಾಗಿ ಚರ್ಚಿಸಲು ದಿಲ್ಲಿಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಸಂಪುಟ ಪುನಾರಚಿಸಿ ಎಂದು ಹೈಕಮಾಂಡ್ ಸಮ್ಮತಿ ನೀಡಿತ್ತು. ಆದರೆ ಎರಡೂವರೆ ವರ್ಷದ ಬಳಿಕ ಸಂಪುಟ ಪುನಾರಚನೆ ಮಾಡುವುದಾಗಿ ತಾವು ಹೇಳಿ ಬಂದಿದ್ದಾಗಿ ತಿಳಿಸಿದರು.
ಈಗ ಹೈಕಮಾಂಡ್ ಹೇಳಿದರೆ ಸಂಪುಟ ಪುನಾರಚಿಸಲಾಗುತ್ತದೆ. ನಾಯಕತ್ವ ಬದಲಾವಣೆ ವಿಷಯದಲ್ಲೂ ವರಿಷ್ಠರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.




