ಬೆಳಗಾವಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಾಗಿ ಇತ್ತೀಚಿಗೆ ವದಂತಿಗಳು ಹಬ್ಬಿವೆ. ಇದನ್ನೆಲ್ಲಾ ಯಾರು ಸೃಷ್ಠಿಸುತ್ತಿದ್ದಾರೊ. ಯಾವುದೇ ಕಾರಣಕ್ಕೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟನೆ ನೀಡಿದ್ದಾರೆ.
ಇಂದು ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಆಂತರಿಕ ವಿಚಾರಗಳ ಬಗ್ಗೆ ಬಿಜೆಪಿ ನಾಯಕರು ಸುಳ್ಳು ವದಂತಿ ಹರಡಿಸುತ್ತಿದ್ದಾರೆ. ಬಿಜೆಪಿಯ ಆಧಾರ ರಹಿತ ಮಾತುಗಳನ್ನು ನಂಬಬೇಡಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ. ಬದಲಾಗೋದಿದ್ದರೆ ಡಿಕೆ ಶಿವಕುಮಾರ್ ಬೆಳಗಾವಿಗೆ ಏಕೆ ಬರುತ್ತಿದ್ದರು ಎಂದು ಪ್ರಶ್ನಿಸಿದರು.
ಸಚಿವ ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್‌ನಿಂದ ನೋಟಿಸ್ ನೀಡಿರುವ ವಿಚಾರ ಸಂಬಂಧ ಪತ್ರಕರ್ತರು ಕೇಳಿದ್ದಕ್ಕೆ, ನೋಟಿಸ್ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವ ಸಚಿವರಿಗೂ, ಯಾವ ಕಾಂಗ್ರೆಸ್ ನಾಯಕರಿಗೂ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ. ಸುಮ್ಮನೆ ಇಲ್ಲಸಲ್ಲದ ವದಂತಿ ಹಬ್ಬಿಸುತ್ತಿದ್ದಾರೆ ಎಂದರು.
ಜ.21ರಂದು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ರ‍್ಯಾಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.