Mysore
18
clear sky

Social Media

ಬುಧವಾರ, 21 ಜನವರಿ 2026
Light
Dark

ಪರಿಣಾಮಕಾರಿ ಕರ್ತವ್ಯ ನಿರ್ವಹಿಸದಿದ್ರೆ ಬದಲಾವಣೆ ಅನಿವಾರ್ಯ : ಸಿಎಂ ಎಚ್ಚರಿಕೆ 

Change is Inevitable if Duties Are Not Performed Effectively: CM's Warning
ಬೆಂಗಳೂರು : ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿ, ತಪ್ಪಿದಲ್ಲಿ  ನಿಮ್ಮನ್ನು ಬದಲಾಯಿಸುವುದು ಅನಿವಾರ್ಯವಾಗುತ್ತದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ಕಾರ್ಯ ನಿರ್ವಹಣಾ ಸಭೆಯ  ಪ್ರಗತಿ ಪರಿಶೀಲನ ಸಭೆ ನಡೆಸಿದರು.
ಸಭೆಯ ಇತರೆ ಮುಖ್ಯಾಂಶಗಳು ಹೀಗಿವೆ ;
•         ಸರ್ಕಾರದ ಪರವಾಗಿ ಸಮರ್ಪಕವಾಗಿ ವಾದ ಮಾಡಲು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.
• ಸರ್ಕಾರದ ಕಾನೂನುಗಳನ್ನು ಎಲ್ಲಾ ಹಂತಗಳಲ್ಲಿ ಎತ್ತಿ ಹಿಡಿಯುವುದು ನಿಮ್ಮ ಕರ್ತವ್ಯ. ಕರ್ನಾಟಕ ರಾಜ್ಯ ಅಧಿನಿಯಮಗಳ ಸಂಪೂರ್ಣ ಅನುಷ್ಠಾನ, ಉದ್ದೇಶದ ನಿರ್ವಹಣೆ ನಿಮ್ಮ ಕೈಯಲ್ಲಿದೆ.
• ನೀವೆಲ್ಲರೂ ಹಿರಿಯ ನ್ಯಾಯವಾದಿಗಳಿದ್ದೀರಿ. ಸರ್ಕಾರದ ಆದ್ಯತೆಗಳನ್ನು ಕಾಪಾಡುವುದು ನಿಮ್ಮೆಲ್ಲರ ಜವಾಬ್ದಾರಿ. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ.
• ನ್ಯಾಯಾಲಯಗಳಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸದ ಕಾರಣಕ್ಕೆ ನಾವು ಹಲವು ಪ್ರಕರಣಗಳಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಸರ್ಕಾರಕ್ಕೆ ಅನುಕೂಲಕರವಾದ ಕೇಸ್‌ಗಳಲ್ಲಿ ಸಹ ಸರ್ಕಾರದ ಪರವಾಗಿ ಆದೇಶಗಳು ಬರುತ್ತಿಲ್ಲ ಯಾಕೆ?
• ಅನೇಕ ಪ್ರಕರಣಗಳಲ್ಲಿ ಸರ್ಕಾರದ ವಿರುದ್ಧ ಯಾಕೆ ಸುಲಭವಾಗಿ ತಡೆಯಾಜ್ಞೆ ದೊರೆಯುತ್ತದೆ? ತಡೆಯಾಜ್ಞೆಯನ್ನು ವರ್ಷಗಟ್ಟಲೆ ತೆರವುಗೊಳಿಸದೆ ಇಡುವ ಪ್ರಕರಣಗಳು ಯಾಕೆ ಹೆಚ್ಚಾಗುತ್ತಿವೆ? ಸರ್ಕಾರದ ವಿರುದ್ಧದ ತಡೆಯಾಜ್ಞೆ ಪ್ರಕರಣಗಳನ್ನು ಆದಷ್ಟು ಬೇಗನೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.
• ಕೆಲವು ಸಂದರ್ಭಗಳಲ್ಲಿ ಸಣ್ಣಪುಟ್ಟ ಪ್ರಕರಣಗಳಲ್ಲಿ ಸಹ ಸರ್ಕಾರಕ್ಕೆ ಮುಜುಗುರವಾಗುವಂತಹ ಬೆಳವಣಿಗೆಗಳು ಆಗಿವೆ. ನಿಮ್ಮ ತಪ್ಪುಗಳಿಂದ ಸರ್ಕಾರಕ್ಕೆ ಮುಜುಗುರವುಂಟಾಗುವ ಪರಿಸ್ಥಿತಿ ಬರಬಾರದು.
• ಸಂಪೂರ್ಣ ಸಿದ್ಧತೆಯೊಂದಿಗೆ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಬೇಕು. ಮೆರಿಟ್‌ ಇರುವ ಪ್ರಕರಣಗಳಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಲು ಅವಕಾಶ ನೀಡಬಾರದು.
• ಪ್ರತಿಯೊಂದು ಪ್ರಕರಣಗಳನ್ನು ಸವಾಲಿನಿಂದ ಸ್ವೀಕರಿಸಿ, ಕಾರ್ಯ ನಿರ್ವಹಿಸಿದರೆ ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯವಿದೆ. ನಿಮ್ಮಿಂದ ಹೆಚ್ಚಿನ ಕ್ರಿಯಾಶೀಲ ಕಾರ್ಯನಿರ್ವಹಣೆಯನ್ನು ಸರ್ಕಾರ ಅಪೇಕ್ಷಿಸುತ್ತದೆ.
• ಇಲಾಖೆಗಳಿಂದ ಅಥವಾ ಅಧಿಕಾರಿಗಳಿಂದ ಸರಿಯಾಗಿ ಸ್ಪಂದನೆ ದೊರೆಯದಿದ್ದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು.
• ಎಲ್ಲಾ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಿಗೆ ಇಲಾಖಾವಾರು ಕಾರ್ಯಕ್ಷೇತ್ರವನ್ನು ನಿಗದಿಪಡಿಸಬೇಕು.
• ನ್ಯಾಯಾಂಗದಲ್ಲಿನ ಎಲ್ಲಾ ಅಡ್ಡಿಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇನ್ನಷ್ಟು ಕ್ರಿಯಾ ಶೀಲರಾಗಿ ಕಾರ್ಯನಿರ್ವಹಿಸಿ.
• ರಾಜ್ಯ ಸರ್ಕಾರದ ಪರವಾದ ನ್ಯಾಯಾಂಗ ಹೋರಾಟಗಳನ್ನು ಇನ್ನಷ್ಟು ವೃತ್ತಿಪರಗೊಳಿಸುವ ಅಗತ್ಯವಿದೆ.
• ರಾಜ್ಯ ಸರ್ಕಾರದ 21799  ಪ್ರಕರಣಗಳು ಹೈಕೋರ್ಟ್ನಲ್ಲಿ ಬಾಕಿಯಿವೆ. ಇದರಲ್ಲಿ 5016 ಪ್ರಕರಣಗಳಲ್ಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇದನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು.
• ಮುಖ್ಯ ಕಾರ್ಯದರ್ಶಿಯವರು ಎಲ್ಲಾ ಹೆಚ್ಚುವರಿ ಅಡ್ವೊಕೇಟ್ ಜನರಲ್‌ ಅವರ ಸಭೆಯನ್ನು ಕರೆದು ಸಮನ್ವಯತೆಯಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು.
ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್, ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಅಡ್ವೊಕೇಟ್‌ ಜನರಲ್ ಶಶಿಕಿರಣ್ ಶೆಟ್ಟಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು ಅಧಿಕಾರಿಗಳು ಉಪಸ್ಥಿತರಿದ್ದರು.
Tags:
error: Content is protected !!