ಬೆಂಗಳೂರು : ಸಣ್ಣಮಟ್ಟದ ವ್ಯಾಪಾರಿಗಳಿಗೆ ಜಿಎಸ್.ಟಿ ನೋಟೀಸ್ ನೀಡಿರುವುದರ ಹಿಂದೆ ಕೇಂದ್ರ ಸರ್ಕಾರದ ಜಿಎಸ್.ಟಿ ಕೌನ್ಸಿಲ್‍ನ ಪತ್ರದ ಪಾತ್ರ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತರಕಾರಿ ಮಾರುವವರು, ಎಳನೀರು ವ್ಯಾಪಾರಿಗಳು, ಹೂಕಟ್ಟುವವರು, ಹಣ್ಣಿನ ವ್ಯಾಪಾರಿಗಳು, ಬೀದಿಬದಿಯ ವ್ಯಾಪಾರಿಗಳಿಗೂ ಕೇಂದ್ರ ಸರ್ಕಾರದ ಜಿಎಸ್.ಟಿ ಕಾನೂನಿನಿಂದ ತೊಂದರೆಯಾಗುತ್ತಿದೆ. ಇದರ ವಿರುದ್ಧ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್‍ಗಾಂಧಿ ಹೋರಾಟ ನಡೆಸಲಿದ್ದಾರೆ ಎಂದರು.
2019 ರಲ್ಲಿ ಕೇಂದ್ರ ಸರ್ಕಾರ ಸರಕು ಮತ್ತು ಸೇವೆಗಳ ಕಾಯ್ದೆ (ಜಿಎಸ್.ಟಿ ಆಕ್ಟ್) ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ 40 ಲಕ್ಷ ರೂ.ಗಳಿಗೂ ಮೇಲ್ಟಟ್ಟ ವಹಿವಾಟು ನಡೆದರೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಬಿಜೆಪಿಯವರು ಬಾಳೆಹಣ್ಣು ತಿಂದು ನಮ ಬಾಯಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಕೇಂದ್ರಸರ್ಕಾರದ ಜಿಎಸ್.ಟಿ ಕೌನ್ಸಿಲ್ ಬರೆದಿರುವ ಪತ್ರ ನಮ ಬಳಿ ಇದೆ. ಅಗತ್ಯ ಇದ್ದರೆ ಅದನ್ನು ಬಹಿರಂಗಪಡಿಸುತ್ತೇವೆ. ಈ ಪತ್ರದ ಮೂಲಕ ಕ್ರಮ ಕೈಗೊಳ್ಳಲು ಒತ್ತಡ ಹೇರಲಾಗಿದೆ. ಅದರಂತೆ ವಾಣಿಜ್ಯ ತೆರಿಗೆ ಇಲಾಖೆ 14 ಸಾವಿರ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟೀಸ್ ನೀಡಿದೆ ಎಂದು ಹೇಳಿದರು. ಕರ್ನಾಟಕ ಅತಿ ಹೆಚ್ಚು ಜಿಎಸ್.ಟಿ ಪಾವತಿಸುವ ರಾಜ್ಯ. ಜೀವನೋಪಾಯಕ್ಕಾಗಿ ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ಈಗ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರ ಇದನ್ನು ಗಮನಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ರಾಜ್ಯಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದ್ದಾರೆ. ಆದರೆ ಕೇಂದ್ರದ ಕಾನೂನುಗಳು ಸರಿ ಇಲ್ಲ. ಅವುಗಳನ್ನು ಸರಿಪಡಿಸುವ ಕೆಲಸ ಕೂಡಲೇ ನಡೆಯಬೇಕಿದೆ ಎಂದರು.
ಒಂದು ಲಕ್ಷ ಕೋಟಿ ರೂಪಾಯಿಯ ತೆರಿಗೆ ಸಂಗ್ರಹದ ಗುರಿಯನ್ನು ತಲುಪಬೇಕು ಎಂದು ಮುಖ್ಯಮಂತ್ರಿಯವರು ಆದೇಶಿಸಿದ ಕಾರಣಕ್ಕಾಗಿ ಈ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದು ಸರಿಯಲ್ಲ.ಕೇಂದ್ರ ಸರ್ಕಾರದ ಕಾನೂನುಗಳು ಪರಿಷ್ಕರಣೆಯಾಗಬೇಕು. ಜಿಎಸ್.ಟಿ ಕೌನ್ಸಿಲ್‍ಗೆ ಬರೆದ ಪತ್ರವನ್ನು ಬಿಜೆಪಿಯವರು ಒಮೆ ನೋಡಲಿ. ನಾವು ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತೇವೆ. ನಮಲ್ಲಿ ಪರಿಹಾರ ಸಿಗುತ್ತದೆ ಎಂಬ ಕಾರಣಕ್ಕಾಗಿಯೇ ಜನ ನಮನ್ನು ಭೇಟಿ ಮಾಡುತ್ತಾರೆ ಎಂದು ಡಿಕೆಶಿ ಹೇಳಿದರು.





