Mysore
25
overcast clouds
Light
Dark

ಪ್ರಜ್ವಲ್‌ ಪಾಸ್‌ಪೊರ್ಟ್‌ ರದ್ದತಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ: ಡಾ.ಜಿ.ಪರಮೇಶ್ವರ್

ಬೆಂಗಳೂರು:  ಲೈಂಗಿಕ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೀಡಲಾಗಿರುವ ರಾಜತಾಂತ್ರಿಕ ಪಾಸ್‍ಪೊರ್ಟ್ ಅನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆಯಲಾಗಿದೆ. ಆದರೆ ಈವರೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಇಂದು(ಮೇ.22) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಮುಖ್ಯಮಂತ್ರಿ ಹಾಗೂ ಎಸ್‌ಐಟಿ ಮುಖ್ಯಸ್ಥರು ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದುಗೊಳಿಸುವಂತೆ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಆದರೆ ಕೇಂದ್ರ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕಾನೂನು ಚೌಕಟ್ಟಿನಲ್ಲ ಕೆಲಸ ಮಾಡಬೇಕು. ನಮ್ಮ ಪತ್ರಕ್ಕೆ ಸ್ಪಂದಿಸಿ ಕ್ರಮ ಕೈಗೊಳ್ಳದೆ ಕೇವಲ ಟೀಕೆ, ಟಿಪ್ಪಣಿಗಳನ್ನು ಮಾಡಲಾಗುತ್ತಿದೆ.  ನ್ಯಾಯಾಲಯದಿಂದ ವಾರಂಟ್ ಜಾರಿಯಾದ ಮೇಲೆ ಡಿಪ್ಲೋಮೇಟಿಕ್ ಪಾಸ್ ಅನ್ನು ರದ್ದು ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಅಧಿಕೃತವಾದ ಮಾದರಿಯಲ್ಲೇ ಪತ್ರ ಬರೆಯಲಾಗಿದೆ. ಇದು ಪ್ರಜ್ವಲ್ ರೇವಣ್ಣ ಅವರಿಗೆ ಸೀಮಿತವಾಗುವ ವಿಷಯವಲ್ಲ. ಕಾನೂನಿಗೆ ಸಂಬಂಧಪಟ್ಟ ವಿಚಾರ. ಕೇಂದ್ರ ಸರ್ಕಾರ ಇಂತಹ ಸಂದರ್ಭದಲ್ಲಿ ಸಹಕಾರ ನೀಡಬೇಕು. ಕಾನೂನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರತಿಯೊಂದು ವಿಚಾರಕ್ಕೂ ಟೀಕೆ, ಟಿಪ್ಪಣಿ ಮಾಡುತ್ತಿದ್ದಾರೆ. ತಾವು ಹೇಳಿದಂತೆಯೇ ಎಲ್ಲವೂ ನಡೆಯಬೇಕು ಎಂಬ ಮನೋಭಾವನೆಯನ್ನು ಕುಮಾರಸ್ವಾಮಿ ಹೊಂದಿರುವಂತೆ ಕಂಡುಬರುತ್ತಿದೆ ಎಂದು ಆಕ್ಷೇಪಿಸಿದರು.

ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಫೋನ್ ಟ್ಯಾಪಿಂಗ್‌ ಆಗುತ್ತಿಲ್ಲ. ಈ ಬಗ್ಗೆ ಕುಮಾರಸ್ವಾಮಿಗೆ ನಿಖರ ಮಾಹಿತಿ ಇದ್ದರೆ ಮಾಹಿತಿ ಕೊಡಲಿ ತನಿಖೆ ನಡೆಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಬಿಜೆಪಿಯವರು ತಮ್ಮ ವಿರುದ್ಧ ಟೀಕೆ ಮಾಡಿ ರಾಜೀನಾಮೆ ಕೇಳುತ್ತಿದ್ದಾರೆ ಎನ್ನುವ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು,   ಈಗಾಗಲೇ ಮುಖ್ಯಮಂತ್ರಿಯವರು ಅಪರಾಧ ಪ್ರಕರಣಗಳ ಅಂಕಿ ಅಂಶಗಳನ್ನು ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಪರಮೇಶ್ವರ್ ಹೇಳಿದರು.

ಖಾಸಗಿ ವಲಯದಲ್ಲಿ ಮೀಸಲಾತಿ ನೀಡಬೇಕೆಂದು ಹಲವು ವರ್ಷಗಳಿಂದಲೂ ನಮ್ಮ ಪಕ್ಷ ಒತ್ತಾಯ ಮಾಡುತ್ತಾ ಬಂದಿದೆ. ಈ ಸಂದರ್ಭದಲ್ಲಿ ಮೆರಿಟ್ ವಿಷಯದಲ್ಲಿ ರಾಜಿಯಾಗುವ ಅಗತ್ಯವಿಲ್ಲ. ಗುಣಮಟ್ಟ ಪಾಲನೆ ಮುಖ್ಯ ಎಂಬುದು ನಮ್ಮ ನಿಲುವು. ಈಗ ರಾಜ್ಯಸರ್ಕಾರ ಹೊರಗುತ್ತಿಗೆಯಲ್ಲಿ ರೋಸ್ಟರ್ ಪದ್ಧತಿಯಂತೆ ಮೀಸಲಾತಿ ಜಾರಿಗೊಳಿಸಲು ನಿರ್ಧಾರ ಕೈಗೊಂಡಿದೆ ಎಂದರು.