ಬೆಂಗಳೂರು: ಎಲ್ಲಾ ಜಾತಿಯ ಬಡವರನ್ನು ಗುರುತಿಸುವ ಪ್ರಮುಖ ಉದ್ದೇಶ ಹೊಂದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಿಗದಿತ ಸಮಯಕ್ಕೆ ಶುರುವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಸ್ಪಷ್ಟಪಡಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಕಾವೇರಿದ ಚರ್ಚೆಯ ಬಳಿಕ ಸಮೀಕ್ಷೆಯನ್ನು ಮುಂದೂಡುವ ಸಾಧ್ಯತೆಗಳಿವೆ ಎಂಬ ವದಂತಿಗಳಿದ್ದವು. ಇದಕ್ಕೆ ತೆರೆ ಎಳೆದಿರುವ ಸಚಿವ ಸಂತೋಷ ಲಾಡ್, ಸಂಪುಟದ ಸಚಿವರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಅಥವಾ ಗೊಂದಲಗಳು ಇಲ್ಲ. ಸೆ.22ರಿಂದಲೇ ಸಮೀಕ್ಷೆ ನಡೆಯಲಿವೆ ಎಂದಿದ್ದಾರೆ.
ಮಾಧ್ಯಮಗಳಲ್ಲಿ ಅನಗತ್ಯವಾದ ವದಂತಿಗಳನ್ನು ಸೃಷ್ಟಿಸಲಾಗುತ್ತಿದೆ. ಸಚಿವ ಸಂಪುಟಸಭೆಯಲ್ಲಿ ಯಾರು ಮೇಜು ಕುಟ್ಟಿ ಪ್ರಶ್ನೆ ಮಾಡಿಲ್ಲ, ರಾಜ್ಯ ಸರ್ಕಾರದ ನಡೆಸುತ್ತಿರುವುದು ಜಾತಿ ಜನಗಣತಿಯನ್ನಲ್ಲ. ಎಲ್ಲಾ ಜಾತಿಯ ಬಡವರನ್ನು ಗುರುತಿಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮಾತ್ರ ಎಂದು ಹೇಳಿದರು.
ಹೆಚ್ಚುವರಿಯಾಗಿ 331 ಜಾತಿಗಳ ಬಗ್ಗೆ ಪ್ರಮುಖವಾಗಿ ಪ್ರಶ್ನೆಗಳು ಎದ್ದಿವೆ. ಈ ಹಿಂದೆ ಕಾಂತರಾಜು ಆಯೋಗದಲ್ಲಿ ಇಲ್ಲದೆ ಇರುವ ಜಾತಿಗಳು ಈಗ ಎಲ್ಲಿಂದ ಬಂದಿವೆ ಎಂಬ ಪ್ರಶ್ನೆ ಹಾಕಲಾಗುತ್ತಿದೆ. ಇತ್ತೀಚೆಗೆ ಹಿಂದುಳಿದ ವರ್ಗಗಳ ಆಕ್ಷೇಪಣೆಗಳನ್ನು ಆಹ್ವಾನಿಸಿದಾಗ ಬಹಳಷ್ಟು ಮಂದಿ ಉಪಜಾತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅದನ್ನು ಆಧರಿಸಿ ಸಮೀಕ್ಷೆಯ ಕಾಲಂಗಳನ್ನು ಸೇರಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಹೊಸ ಜಾತಿಗಳು ಸೇರ್ಪಡೆಯಾಗಿವೆ ಎಂದು ಅರ್ಥವಲ್ಲ ಎಂದರು.





