ಹೊಸದಿಲ್ಲಿ : ಇಂಡಿಗೋ ವಿಮಾನಯಾನ ಸಂಸ್ಥೆಯ ಮೂವರು ಹಿರಿಯ ಅಧಿಕಾರಿಗಳು ತನಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಸಂಸ್ಥೆಯ ಉದ್ಯೋಗಿಯೊಬ್ಬರು ಆರೋಪಿಸಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ 35 ವರ್ಷದ ಶರಣ್ ಎಂಬುವರು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಘಟನೆ ಗುರುಗ್ರಾಮದಲ್ಲಿ ನಡೆದ ಕಾರಣ ಬೆಂಗಳೂರು ಪೊಲೀಸರು ಪ್ರಕರಣವನ್ನು ಗುರುಗ್ರಾಮ ಪೊಲೀಸರಿಗೆ ವರ್ಗಾಯಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಾನು ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು, ಇಂಡಿಗೋ ವಿಮಾನ ಸಂಸ್ಥೆಯ ಹಿರಿಯ ಅಧಿಕಾರಿಗಳು ʻನೀನು ವಿಮಾನ ಹಾರಿಸಲು ಯೋಗ್ಯನಲ್ಲʼ ಬೂಟುಗಳನ್ನು ಹೊಲಿಯಬೇಕು ಎಂದು ನಿಂದಿಸಿದ್ದಾರೆ. ಅಲ್ಲದೇ ಅನೇಕ ವೇಳೆ ನನ್ನನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇಂಡಿಗೋ ವಿಮಾನ ಅಧಿಕಾರಿಗಳಾದ ತಪಸ್ ಡೇ, ಮನೀಶ್ ಸಾಹ್ನಿ ಮತ್ತು ಕ್ಯಾಪ್ಟನ್ ರಾಹುಲ್ ಪಾಟೀಲ್ ಅವರು ಎಲ್ಲರ ಮುಂದೆ ಹಲವು ಜಾತಿ ಆಧಾರಿತ ಟೀಕೆಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪೊಲೀಸರು ಎಸ್‍ಸಿ/ಎಸ್‍ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.





