ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಶಾಲಾ, ಕಾಲೇಜುಗಳ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಚಟುವಟಿಕೆಗಳು ಸೇರಿದಂತೆ ಖಾಸಗಿ ಕಾರ್ಯಕ್ರಮಗಳನ್ನು ನಿಷೇಧಿಸಿಸಲಾಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಗುರುವಾರ ಮಹತ್ವ ನಿರ್ಧಾರ ಕೈಗೊಂಡಿದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಇದು ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಗೆ ಕಡಿವಾಣ ಹಾಕುವ ಬಗ್ಗೆ ಇಂದಿನ ಸಭೆಯಲ್ಲಿ ತಿರ್ಮಾನಿಸಲಾಗುವುದು. ತಮಿಳುನಾಡು ಮಾದರಿ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸಭೆ ಮುನ್ನ ತಿಳಿಸಿದ್ದರು.
ಇದನ್ನು ಓದಿ: ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸದಂತೆ ನಿಷೇಧಿಸಿ: ಸಿಎಂಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ್ ಖರ್ಗೆ
ನಂತರ ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ಸಚಿವರು, ಸಿಎಂ, ಡಿಸಿಎಂ ಚರ್ಚಿಸಿದರು. ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಧರ್ಮದ ಖಾಸಗಿ ಕಾರ್ಯಕ್ರಮಗಳಿಗೆ ಸರ್ಕಾರಿ ಜಾಗಗಳಲ್ಲಿ ನಿಷೇಧಿಸಲಾಗಿದೆ. ಇದು ಕೇವಲ ಆರ್‌ಎಸ್‌ಎಸ್ ಮಾತ್ರವಲ್ಲ ಇತರ ಖಾಸಗಿ ಸಂಘಟನೆ, ಸಂಸ್ಥೆಗಳಿಗೂ ಅನ್ವಯವಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಈ ಮೂಲಕ ಆರ್‌ಎಸ್‌ಎಸ್ ಚಟುವಟಿಕೆಗೆ ಸರ್ಕಾರ ಮೂಗುದಾರ ಹಾಕಿದೆ. ಆರ್‌ಎಸ್‌ಎಸ್ ಬೈಠಕ್, ಕವಾಯಿತಿ ನಿರ್ಬಂಧಿಸಿದಂತಾಗಿದೆ.
ತಮಿಳುನಾಡು ಮಾದರಿ ಅನುಸರಿಸಿದ ರಾಜ್ಯ ಸರ್ಕಾರ ಈ ತಿರ್ಮಾನಕ್ಕೆ ಬಂದಿದೆ. ಅಲ್ಲಿ ಸರ್ಕಾರಿ ಜಾಗಗಳಲ್ಲಿ ಯಾವುದೊ ಒಂದು ಖಾಸಗಿ ಸಂಸ್ಥೆ, ಸಂಘಟನೆ ಯಾವುದಾದರೂ ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಅದೇ ರೀತಿ ಇಲ್ಲಿಯೂ ಮಾಡಲಾಗಿದೆ. ಶೀಘ್ರವೇ ಈ ಕುರಿತು ಹೊಸ ನಿಯಮ ಜಾರಿಗೆ ತರಲು ಸರ್ಕಾರ ನಿರ್ಧಾರ. ಸಂಪುಟದಲ್ಲಿ ಖಾಸಗಿ ಸಂಘಟನೆ, ಸಂಸ್ಥೆ ಎಂದಿರುವ ನಾಯಕರು ಎಲ್ಲಿಯೂ ಆರ್‌ಎಸ್‌ಎಸ್ ಎಂದು ಉಲ್ಲೇಖಿಸದೇ ನಿರ್ಬಂಧ ನಿಯಮ ಜಾರಿಗೆ ತಂದಿದೆ.





