ಬೆಂಗಳೂರು: ಬೆಂಗಳೂರಿನಲ್ಲಿ 4 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ 500 ಕಿ.ಮೀ. ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಈ ಕುರಿತು ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 1.40 ಕೋಟಿ ಜನ ಸಂಖ್ಯೆಯಿದೆ. ದಿನವೊಂದಕ್ಕೆ 3400 ವಾಹನಗಳು ನೋಂದಣಿಯಾಗುತ್ತಿದ್ದು, ಒಟ್ಟು 1.27 ಕೋಟಿ ವಾಹನಗಳಿವೆ. 40 ರಿಂದ 45 ಸಾವಿರ ವಾಹನಗಳು ಬೆಂಗಳೂರಿಗೆ ಪ್ರತಿದಿನ ಬರುತ್ತಿವೆ. ಸಂಚಾರ ದಟ್ಟಣೆ ತೀವ್ರವಾಗಿದೆ. ರಸ್ತೆಗಳನ್ನು ಅಗಲ ಮಾಡಲಾಗುವುದಿಲ್ಲ, ಇರುವುದನ್ನೇ ಸರಿಪಡಿಸಿಕೊಳ್ಳಬೇಕು ಎಂದರು.
117 ಕಿ.ಮೀ. ಫೆರಿಫರಲ್ ಬಿಸನೆಸ್ ಕಾರಿಡಾರ್ ಯೋಜನೆಗೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ಮಂಜೂರಾತಿ ನೀಡಲಾಗಿದೆ. ಭೂಮಿ ಕಳೆದುಕೊಳ್ಳುವ ರೈತರಿಗೆ ಮತ್ತು ಮಾಲೀಕರಿಗೆ ದ್ವಿಗುಣ ಪರಿಹಾರ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶಲ್ಲಿ 3 ಪಟ್ಟು, ನಗರ ಪ್ರದೇಶದಲ್ಲಿ ಟಿಡಿಆರ್, ಎಫ್‍ಎಆರ್ ಮಾದರಿಯಲ್ಲಿ ಪರಿಹಾರ ನೀಡುವ ತೀರ್ಮಾನವನ್ನು ಧೈರ್ಯವಾಗಿ ತೆಗದುಕೊಳ್ಳಲಾಗಿದೆ. ಈ ರಸ್ತೆ ನಿರ್ಮಾಣದಿಂದ ನಗರದ ಒಳಗೆ ಬರುವ ಶೇ. 30ರಷ್ಟು ವಾಹನಗಳ ದಟ್ಟಣೆ ಕಡಿಮೆಯಾಗಲಿದೆ ಎಂಬ ಕಾರಣಕ್ಕೆ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
2007ರಲ್ಲೇ ಈ ರಸ್ತೆಗೆ ಅಧಿಸೂಚನೆ ಹೊರಡಿಸಿದ್ದರೂ ಈವರೆಗೂ ಅನುಷ್ಠಾನವಾಗಿಲ್ಲ. ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಬೆಂಗಳೂರಿನ ನಾಗರಿಕರಿಗೆ ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಅಭಿಯಾನ ಕೈಗೊಂಡಿದ್ದೇವೆ. ದಾಖಲಾತಿಗಳ ಕ್ರಮಬದ್ಧಗೊಳಿಸುವ ಮೂಲಕ ಏಕರೂಪತೆ ತರುವ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕೆ ಕೇಂದ್ರದ ಮೋದಿ ಸರ್ಕಾರ ಪ್ರಶಂಸೆ ನೀಡಿದೆ ಎಂದರು.
ಇದನ್ನು ಓದಿ: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಒಂದು ವಾರದೊಳಗೆ ಮುಚ್ಚಬೇಕು: ಸಿಎಂ ಸಿದ್ದರಾಮಯ್ಯ ಸೂಚನೆ
ಬೆಂಗಳೂರಿನಲ್ಲಿ 1650 ಕಿ.ಮೀ ಪ್ರಮುಖ ರಸ್ತೆಗಳಿವೆ. ಅವುಗಳಲ್ಲಿ 104 ಕಿ.ಮೀ. ವೈಟ್ ಟಾಪಿಂಗ್ ಆಗಿದೆ. 182 ರಸ್ತೆಗಳ 352 ಕಿ.ಮೀ ಉದ್ದವನ್ನು 695 ಕೋಟಿ ರೂ.ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡಲಾಗುತ್ತಿದ್ದು, ಈಗ ಬ್ಲಾಕ್ ಟಾಪಿಂಗ್ ನಡೆಯುತ್ತಿದೆ. 148 ಕಿ.ಮೀ. ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. 83 ರಸ್ತೆಗಳನ್ನು 1800 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. 4 ಸಾವಿರ ಕೋಟಿ ವೆಚ್ಚದಲ್ಲಿ 500 ಕಿ.ಮೀ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲು ಕ್ರಿಯ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಬಿಜೆಪಿಯವರು ಅನಗತ್ಯ ಟೀಕೆ ಮಾಡುತ್ತಾರೆ. 113 ಕಿ.ಮೀ. ಮೇಲ್ಸೇತುವೆ ರಸ್ತೆ ನಿರ್ಮಾಣಕ್ಕೆ ನಿರ್ಧಾರ ತೆಗೆದುಕೊಂಡಿದ್ದೇವೆ. 40 ಕಿ.ಮೀ. ಸುರಂಗ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದ್ದು ಒಬ್ಬ ಸಂಸದ ಟೀಕೆ ಮಾಡುತ್ತಿದ್ದಾನೆ. ಆತ ಖಾಲಿ ಡಬ್ಬ, ಟ್ವೀಟ್ ಮಾಡಿ ಟೀಕೆ ಮಾಡುವುದು ಬಿಟ್ಟು, ಒಂದು ರೂ. ಹಣ ತಂದಿಲ್ಲ. ನಿರ್ಮಲಾ ಸೀತರಾಮ್ ಸೇರಿ ಬೆಂಗಳೂರಿಗೆ ಬಿಜೆಪಿಯ 5 ಜನ ಸಂಸದರಿದ್ದಾರೆ. 10 ರೂ. ಹಣ ತಂದಿಲ್ಲ. ಬೆಂಗಳೂರಿಗೆ ಇವರ ಕೊಡುಗೆ ಶೂನ್ಯ ಎಂದು ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದ ಬಳಿಕ ಬೆಂಗಳೂರು ದೇಶಕ್ಕೆ ಅತೀ ಹೆಚ್ಚು ತೆರಿಗೆ ಪಾವತಿಸುತ್ತಿದೆ. ಕೇಂದ್ರದಿಂದಲೂ ನಮಗೆ ಹಣಕಾಸಿನ ಸೌಲಭ್ಯ ಬೇಕು ಎಂದು ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಮನವಿ ಮಾಡಿದ್ದೇವೆ. ಈವರೆಗೂ ಉತ್ತರ ಬಂದಿಲ್ಲ ಎಂದು ಆಕ್ಷೇಪಿಸಿದರು.
ಅಭಿವೃದ್ಧಿ ವಿಚಾರಗಳ ಕುರಿತು ತಾವು ವಿರೋಧ ಪಕ್ಷಗಳ ನಾಯಕರ ಜೊತೆ ತಾವು ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ಕಸ ವಿಲೇವಾರಿ, ಜಾಹಿರಾತು ಫಲಕ ಸೇರಿದಂತೆ ಎಲ್ಲದಕ್ಕೂ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದಾರೆ. ಆದರೂ ನಾವು ಧೈರ್ಯಗೆಡದೇ ಕೆಲಸ ಮಾಡುತ್ತಿದ್ದೇವೆ. ಆದರೆ ಬೆಂಗಳೂರಿನ ಜನ ಮತ ಹಾಕುವಾಗ ನಮ್ಮನ್ನು ಮರೆಯುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.





