ಬೆಂಗಳೂರು: ಕರ್ನಾಟಕ ಅರಾಜಕತೆಯತ್ತ ಸಾಗುತ್ತಿದೆ, ಈ ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರಕ್ಕೆ, ಯಾವುದೇ ಪ್ರತಿಭಟನೆಗಳು, ಜನರ ಆಕ್ರಂದನದ ಬಿಸಿ ತಟ್ಟುತ್ತಿಲ್ಲ. ಈ ಕ್ಷಣದಿಂದಲಾದರೂ ಜನರ ರಕ್ಷಣೆಗೆ ಧಾವಿಸದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಒಂದು ಕಡೆ ಜನರ ಮಾನ, ಪ್ರಾಣ, ಆಸ್ತಿಗಳಿಗೆ ರಕ್ಷಣೆ ಸಿಗದೆ ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರಗಳು ತಾಂಡವವಾಡುತ್ತಿದ್ದರೆ, ಮತ್ತೊಂದು ಕಡೆ ಚಕ್ರಬಡ್ಡಿ ವಸೂಲಿ, ಠೇವಣಿ ವಂಚನೆ ನಿರಂತರವಾಗಿ ನಡೆಯುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸರ್ಕಾರ ಬಂದಾಗಿನಿಂದ ಶೋಷಿತರ ದನಿಯಾಗಿ ಪರಿಶಿಷ್ಟ ಸಮುದಾಯಗಳ ರಕ್ಷಣೆಗೆ ಹಾಗೂ ಪರಿಶಿಷ್ಟ ಕಲ್ಯಾಣದ ಕುರಿತು ವರದಿ ನೀಡಬೇಕಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ನಿಂತ ನೀರಂತಾಗಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ ಎಂದಿದ್ದಾರೆ.
ಪರಿಶಿಷ್ಟರ ಬಗ್ಗೆ ಮೊಸಳೆಗಣ್ಣೀರು ಸುರಿಸುವ ಸರ್ಕಾರದ ಅಸಲಿ ಮುಖವಾಡ ಈಗ ಬಯಲಾಗಿದೆ. ಪರಿಶಿಷ್ಟರ ಆಯೋಗಗಳಿಗೆ ಅಧ್ಯಕ್ಷರ ನೇಮಕವಾಗಿಲ್ಲದಿರುವ ವಿಷಯ ನ್ಯಾಯಾಲಯದ ಮೆಟ್ಟಿಲು ಹತ್ತುವ ಪರಿಸ್ಥಿತಿಯವರೆಗೂ ತಲುಪಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ನ್ಯಾಯಾಲಯದಿಂದಲೇ ಈ ಸರ್ಕಾರಕ್ಕೆ ಚಾಟಿ ಏಟು ಬೀಳದ ಹೊರತು ಪರಿಶಿಷ್ಟರ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಇದೀಗ ಸಾಬೀತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿ ಭಾಗ್ಯಗಳ ಬಗ್ಗೆ ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್ ಸರ್ಕಾರ ಮಹಿಳೆಯರ ಮಾಂಗಲ್ಯ ಭಾಗ್ಯಕ್ಕೆ ಕುತ್ತು ಬಂದಿದ್ದರೂ ಕಣ್ಣು ಮುಚ್ಚಿ ಕುಳಿತಿದೆ. ಈ ನೆಲದ ಹೆಣ್ಣು ತನಗೆ ಯಾವ ಭಾಗ್ಯ ಕೊಡದಿದ್ದರೂ ಚಿಂತೆ ಇಲ್ಲ ಉಸಿರಿರುವ ತನಕ ಮಾಂಗಲ್ಯ ಭಾಗ್ಯ ಉಳಿಸು ಎಂದು ದೇವಾನುದೇವತೆಗಳಲ್ಲಿ ಪ್ರಾರ್ಥಿಸುತ್ತಾಳೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.