ಬೆಂಗಳೂರು : ಕಳೆದ 8 ವರ್ಷಗಳಿಂದಲೂ ಜಿಎಸ್‍ಟಿ ದುಬಾರಿ ದರದಿಂದ ಬಡ ಜನರನ್ನು ಸುಲಿಗೆ ಮಾಡಿದ ಬಿಜೆಪಿ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಜನರಲ್ಲಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬಿಹಾರದ ವಿಧಾನಸಭೆ ಚುನಾವಣೆಯ ಕಾರಣಕ್ಕಾಗಿ ಜಿಎಸ್‍ಟಿ ದರವನ್ನು ಕಡಿತ ಮಾಡಿ, ಉಳಿತಾಯ ಉತ್ಸವ ಮಾಡುತ್ತಿರುವುದು ವಿಕೃತ ಮನಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 8 ವರ್ಷಗಳಲ್ಲಿ ಪೆನ್ಸಿಲ್, ಪುಸ್ತಕ, ಮೊಸರು, ವೈದ್ಯಕೀಯ ಚಿಕಿತ್ಸೆ, ವೈದ್ಯಕೀಯ ಸಲಕರಣೆ, ವಿಮೆ, ಮಂಡಕ್ಕಿ, ದಿನಬಳಕೆ ವಸ್ತುಗಳ ಮೇಲೆಯೂ ಜಿಎಸ್‍ಟಿ ಹಾಕಿ ವಸೂಲು ಮಾಡಲಾಗಿತ್ತು.ಜನ ಸಾಮಾನ್ಯರು ದರ ಏರಿಕೆಯಿಂದ ಹೈರಾಣಾಗಿ ಹೋಗಿದ್ದರು ಎಂದು ಹೇಳಿದರು.
ಕೇಂದ್ರಸರ್ಕಾರದ ತೆರಿಗೆ ಪದ್ಧತಿಯಿಂದ ಶ್ರೀಮಂತರಿಗೆ ದೊಡ್ಡ ದೊಡ್ಡ ಉದ್ಯಮಿಗಳಿಗೆ ಅನುಕೂಲವಾಗಿತ್ತು. ಸಣ್ಣ ಪ್ರಮಾಣದ ವ್ಯಾಪಾರಸ್ತರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಜಿಎಸ್‍ಟಿ ಶೇ.64ರಷ್ಟ ಸಂಗ್ರಹವಾಗುತ್ತಿತ್ತು. ಇದರಲ್ಲಿ ತಳಮಟ್ಟದವರೇ ಶೇ.50 ರಷ್ಟು ತೆರಿಗೆ ಸಲ್ಲಿಸಿದ್ದಾರೆ ಎಂದರು.
ದೇಶದಲ್ಲೇ ಅತೀ ಹೆಚ್ಚು ಶ್ರೀಮಂತರಾಗಿರುವ ಮೋದಿಯ ಸ್ನೇಹಿತರಾದ ಶೇ. 10 ರಷ್ಟು ಮಂದಿ ಪಾವತಿಸಿರುವ ತೆರಿಗೆ ಪ್ರಮಾಣ ಶೇ. 3ರಷ್ಟು ಮಾತ್ರ. ಬಡವರ ರಕ್ತ ಕುಡಿದ ಬಿಜೆಪಿ ಈಗ ಯಾವ ಮುಖ ಇಟ್ಟುಕೊಂಡು ಉಳಿತಾಯ ಉತ್ಸವ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಇದನ್ನು ಓದಿ : ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ | ವಿಚಾರಣೆ ಬುಧವಾರಕ್ಕೆ ಮುಂದೂಡಿದ ಹೈಕೋರ್ಟ್
2006 ರಿಂದ 2010ರ ವರೆಗೆ ಜಿಎಸ್‍ಟಿ ತೆರಿಗೆಯ ಚರ್ಚೆ ನಡೆದಾಗ ವಿರೋಧ ಮಾಡಿದಾಗ ಏಕೈಕ ವ್ಯಕ್ತಿ ನರೇಂದ್ರಮೋದಿ. ಆಗ ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದರು. ಪ್ರಧಾನಿಯಾದ ಬಳಿಕ ಅವೈಜ್ಞಾನಿಕವಾಗಿ ಜಿಎಸ್‍ಟಿ ಜಾರಿ ಮಾಡಿದ್ದರು. ಈಗ ಕಡಿಮೆ ಮಾಡಿದ್ದನ್ನು ಸಂಭ್ರಮಿಸುತ್ತಿದ್ದಾರೆ. ಇಷ್ಟು ದಿನ ವಸೂಲಿ ಮಾಡಿದ್ದಕ್ಕಾಗಿ ಜನರ ಮುಂದೆ ಬಂದು ಕ್ಷಮೆ ಕೇಳುತ್ತಾರೆ ಎಂದುಕೊಂಡಿದ್ದೆವು. ಆದರೆ ಈಗಲೂ ಬೊಗಳೆ ಬಿಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ರಾಹುಲ್‍ಗಾಂಧಿ ಜಿಎಸ್‍ಟಿಯನ್ನು ಗಬ್ಬರ್‍ಸಿಂಗ್ ಟ್ಯಾಕ್?ಸ ಎಂದಾಗ ಬಿಜೆಪಿ ಐಟಿಸಿ ಲೇವಡಿ ಮಾಡಿತ್ತು. ಈಗ ಬಿಜೆಪಿಗೆ ಜ್ಞಾನೋದಯವಾಗಿದೆ ಎಂದು ವ್ಯಂಗ್ಯವಾಡಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುವುದು ಅನಗತ್ಯ. ಯಾರಿಗೆ ತಮ ಜಾತಿಯನ್ನು ಹೇಗೆ ಬರೆಸಬೇಕೆಂದು ಗೊತ್ತಿದೆ. ಯಾರು ದಾರಿ ತಪ್ಪುವುದಿಲ್ಲ. 75 ವರ್ಷಗಳ ಕಾಲ ಕೆಲವರು ತುಪ್ಪ, ಬೆಣ್ಣೆ ತಿನ್ನುತ್ತಿದ್ದರು. ಈಗ ಅದು ಎಲ್ಲಿ ಬೇರೆಯವರಿಗೆ ಹಂಚಿ ಹೋಗುತ್ತದೆಯೋ ಎಂಬ ಭಯದಿಂದ ವಿರೋಧ ಮಾಡುತ್ತಿದ್ದಾರೆ. ಅಂತಹವರ ಹೆಸರನ್ನು ಮಯಖ್ಯಮಂತ್ರಿ ಅವರು ಸಮಾಜದ ಮುಂದೆ ಬಹಿರಂಗ ಪಡಿಸಬೇಕೆಂದು ಹರಿಪ್ರಸಾದ್ ಆಗ್ರಹಿಸಿದರು.
ಆರ್ಥಿಕ ಶೈಕ್ಷಣಿ ಸಮೀಕ್ಷೆ ಮಾಡುತ್ತೇವೆ ಎಂದು ಕಾಂಗ್ರೆಸ್ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲೇ ಭರವಸೆ ನೀಡಿತ್ತು. ಜನ ಅದನ್ನು ಬೆಂಬಲಿಸಿಯೇ ಕಾಂಗ್ರೆಸ್‍ಗೆ ಮತ ಹಾಕಿದ್ದಾರೆ. ಆ ಭರವಸೆಯನ್ನು ಈಡೇರಿಸುವುದು ಕಾಂಗ್ರೆಸ್ ಸರ್ಕಾರದ ಜವಾಬ್ದಾರಿ. ಪಕ್ಷದ ಆಂತರಿಕ ವಲಯದಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.
ಮೀಸಲಾತಿಯ ಪ್ರಮಾಣವನ್ನು ಶೇ. 50 ರಿಂದಿ 70ಕ್ಕೆ ಏರಿಸಬೇಕು ಎಂಬುದು ರಾಹುಲ್‍ಗಾಂಧಿ ಅವರ ಆಶಯ. ಅದಕ್ಕಾಗಿ ದೇಶಾದ್ಯಂತ ಜಾತಿ ಜನಗಣತಿ ನಡೆಯಬೇಕೆಂದು ಪ್ರತಿಪಾದಿಸುತ್ತಿದ್ದಾರೆ.
ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಾಕಷ್ಟು ವಿರೋಧಗಳು ಕೇಳಿ ಬಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದಕ್ಕೆ ಒತ್ತು ನೀಡದೆ ಸಮೀಕ್ಷೆ ಆರಂಭಿಸಿದ್ದಾರೆ. ಇದಕ್ಕಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಎಷ್ಟೇ ವಿರೋಧ ಬಂದರು ಸಮೀಕ್ಷೆಯನ್ನು ನಿಲ್ಲಿಸದೇ ಮುಖ್ಯಮಂತ್ರಿಯವರು ಮುಂದುವರೆದಿದ್ದಾರೆ. ಮೀಸಲಾತಿಯನ್ನು ವಿರೋಧಿಸುವ ಮಹಾಜ್ಞಾನಿಗಳು ಇಡಬ್ಲ್ಯೂಎಸ್ ಜಾರಿಗೆ ಬಂದಾಗ ಏಕೆ ವಿರೋಧಿಸಲಿಲ್ಲ ಎಂದು ಪ್ರಶ್ನಿಸಿದ್ದರಲ್ಲದೇ, ಕಾಂಗ್ರೆಸ್ ಪಕ್ಷ ಧ್ವನಿ ಇಲ್ಲದವರಿಗೆ ಧ್ವನಿ ನೀಡುತ್ತದೆ ಎಂದರು.





