ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ ಪ್ರಕರಣದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯದ ಆದೇಶದಿಂದ ರವಿಕುಮಾರ್ ಬಂಧನದ ಭೀತಿಯಿಂದ ತಾತ್ಕಾಲಿಕ ಪಾರಾಗಿದ್ದಾರೆ.
ರವಿಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್, ಅರ್ಜಿದಾರರು ವಿಚಾರಣೆಗೆ ಸಹಕರಿಸಿದಲ್ಲಿ ಬಲವಂತದ ಕ್ರಮ ಬೇಡ ಎಂದು ತಿಳಿಸಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಂ, ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ದೂರು ನೀಡಿರುವ ಮಹಿಳೆ ವಿದ್ಯುನ್ಮಾನ ಮಾಧ್ಯಮದಲ್ಲಿ ನೋಡಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲು ಮುಂದಾದ ಸಂದರ್ಭದಲ್ಲಿ ಅವರು ಸರಿಯಾಗಿ ಸ್ಪಂದಿಸಿಲ್ಲ. ಈ ಕಾರಣದಿಂದ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಹೀಗಾಗಿ ಪ್ರಕರಣಕ್ಕೆ ತಡೆ ನೀಡಬೇಕು ಎಂದು ಕೋರಿದರು.
ಎಸ್‌ಪಿಪಿ ಬೆಳ್ಳಿಯಪ್ಪ ಪ್ರತಿವಾದ ಮಂಡಿಸಿ ರವಿಕುಮರ್ 2ನೇ ಬಾರಿ ಹೀಗೆ ಮಾತನಾಡ್ತಿದ್ದಾರೆ. ಈ ಹಿಂದೆ ಮಹಿಳಾ ಜಿಲ್ಲಾಧಿಕಾರಿಯೊಬ್ಬರನ್ನ ಪಾಕಿಸ್ತಾನದ ಸಹೋದರಿ ಅಂದಿದ್ರು. ನಾವು ಇಲ್ಲಿ ಡಿಸೈಡ್ ಮಾಡೋದಕ್ಕೆ ಬರೋದಿಲ್ಲ, ತನಿಖೆ ಆಗಲಿ, ಎಫ್‌ಐಆರ್ ಆಗಿ 24 ಗಂಟೆ ಕಳೆದಿಲ್ಲ ಆಗಲೇ ಕೋರ್ಟ್‌ಗೆ ಬಂದಿದ್ದಾರೆ. ವಿಕ್ಟಿಮ್ ಮುಖ್ಯ ಕಾರ್ಯದರ್ಶಿ ಅವರ ಹೇಳಿಕೆ ದಾಖಲಿಸಬೇಕಿದೆ. ಮಾಧ್ಯಮಗಳ ಹೇಳಿಕೆಯನ್ನೂ ದಾಖಲಾಸಲಾಗುತ್ತೆ, ಇದೊಂದು ಏಳು ವರ್ಷಗಳವರೆಗಿನ ಸಜೆಯುಳ್ಳ ಕೇಸ್ ಆಗಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ಇಲ್ಲಿ ರಕ್ಷಣೆ ಕೋರೋದು ಸರಿಯಿಲ್ಲ. ಐಎಎಸ್ ಅಧಿಕಾರಿಗಳು ಇವ್ರ ವಿರುದ್ಧ ಪ್ರತಿಭಟಿಸ್ತಿದ್ದಾರೆ ಅಂತ ವಾದ ಮಂಡಿಸಿದರು.
ರಾಜಕಾರಣಿಗಳು ಬಳಸುವ ಭಾಷೆ ಕೆಳಮಟ್ಟಕ್ಕಿಳಿದಿದೆ ಅಂತ ಅಭಿಪ್ರಾಯ ಪಟ್ಟ ನ್ಯಾಯಾಧೀಶರು, ಜುಲೈ 8ರ ವರೆಗೆ ಬಂಧಿಸದಂತೆ, ತನಿಖೆಗೆ ಸಹಕಾರ ನೀಡುವಂತೆ ಆದೇಶ ನೀಡಿದ್ರು. ಇನ್ನು ಸಂಜೆ ವೇಳೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್, ರವಿಕುಮಾರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ನೀಡಿದರು.





