ಚಿಕ್ಕಮಗಳೂರು: ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವರನ್ನು ನಾನು ರಾಷ್ಟ್ರೀಯ ನಾಯಕನೆಂದು ತಿಳಿದುಕೊಂಡಿದ್ದೆ. ಆದರೆ, ಅವರು ದೊಡ್ಡ ಡ್ರಾಮಾ ಮಾಡುವ ಮಾಸ್ಟರ್ ಆಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಈ ಕುರಿತು ಚಿಕ್ಕಮಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಬಳಿ ಕ್ಷಮೆ ಕೇಳುತ್ತೇನೆ ಎಂದರೆ ಮುಗಿದು ಹೋಗುತ್ತಿತ್ತು. ಆದರೆ ಅವರ ನಡವಳಿಕೆ ಆಚಾರ-ವಿಚಾರ ನೋಡಿದರೆ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಭಾವಿಸಿರಲಿಲ್ಲ. ಬೇರೆ ಯಾರು ಒಪ್ಪುವುದೇ ಬೇಡ, ಅತ್ಮಸಾಕ್ಷಿ ಕೇಳಿದರೆ ಸಾಕಿತ್ತು. ರವಿ ಹೀಗೆ ಮಾತನಾಡಬಾರದಿತ್ತು ಎಂದು ಬಿಜೆಪಿಯ ನಾಯಕರೇ ಹೇಳಿದ್ದಾರೆ ಎಂದು ಸಿ.ಟಿ.ರವಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ರಾಜ್ಯದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಅವರು, ನನಗೆ ಯಾರ ಬೆಂಬಲವು ಬೇಡ, ನನಗಾಗಿ ಯಾವ ನಾಯಕರು, ಶಾಸಕರು, ಬೆಂಬಲಿಗರು ಕೂಗುವುದು ಬೇಡ. ದೇವಸ್ಥಾನಕ್ಕೆ ಹೋಗುವುದನ್ನು ಟೆಂಪಲ್ ರನ್ ಎಂದರೆ ದೇವಸ್ಥಾನಕ್ಕೆ ಬೀಗ ಹಾಕಿಸಿ ಎಂದು ಹೇಳಿದ್ದಾರೆ.
ನಾನು ದೇವರು, ಧರ್ಮದ ಮೇಲೆ ನಂಬಿಕೆ ಇಟ್ಟವನು ಹಾಗಾಗಿ ಪೂಜೆ ಮಾಡುತ್ತೇನೆ. ಅವರವರ ನಂಬಿಕೆ ಆಚಾರ-ವಿಚಾರ ಅವರಿಗೆ ಬಿಟ್ಟದ್ದು ಎಂದು ತಿಳಿಸಿದರು.
ಪಕ್ಷದಲ್ಲಿ ಹೈಕಮಾಂಡ್ ಹೇಳಿದ್ದೆ ಅಂತಿಮ. ರಾಜಕೀಯದಲ್ಲಿ ತಿರುವು ಎನ್ನುವ ಮಾತು ಗೌಣ. ಎಲ್ಲಾರು ಒಟ್ಟಾಗಿ ಸೇರಿ ಕೆಲಸ ಮಾಡೋಣ. ಫಲಾಫಲ ದೇವರಿಗೆ ಬಿಡೋಣ ಎಂದು ಹೇಳಿದ್ದಾರೆ.