ಬೆಂಗಳೂರು: ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದಿರುವ ಘಟನೆ ನಂದಿನಿ ಲೇಔಟ್‌ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಇಂದು (ಡಿ.25) ಲಕ್ಷ್ಮಿದೇವಿ ನಗರ ವಾರ್ಡ್ ಬಿಜೆಪಿ ಕಚೇರಿಯಲ್ಲಿ ಅಯೋಜಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಶಾಸಕ ಮುನಿರತ್ನ ಹೋಗುತ್ತಿದ್ದ ವೇಳೆ ಅವರ ತಲೆಗೆ ಮೊಟ್ಟೆ ಎಸೆದಿದ್ದಾರೆ. ಬಳಿಕ ಮುನಿರತ್ನ ಹಾಗೂ ಅವರ ಬೆಂಬಲಿಗರು ಕಂಠೀರವ ಸ್ಟೇಡಿಯಂ ಬಳಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಕಾಂಗ್ರೆಸ್ ಬೆಂಬಲಿಗರು ಕೂಡ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ್ಲಲಿ ಎರಡು ಮೂರು ಕಾರುಗಳು ಜಖಂಗೊಂಡಿದ್ದು, ಕೆಲ ಮಂದಿಗೆ ಹಲ್ಲೆಯಾಗಿದೆ ಎನ್ನಲಾಗಿದೆ.
ಸ್ಥಳಕ್ಕೆ ನಂದಿನಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಕಾಂಗ್ರೆಸ್ ಮುಖಂಡರಾದ ಕುಸುಮಾ ಹಾಗೂ ಹನುಮಂತರಾಯಪ್ಪ ಕಾರಣ ಎಂದು ಆರೋಪಿಸಿರುವ ಮುನಿರತ್ನ ನನ್ನನ್ನು ಕೊಲೆ ಮಾಡಿ ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.





