Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ಮತಗಳ್ಳತನದಲ್ಲೂ ಬಿಜೆಪಿಗರು ನಿಸ್ಸೀಮರು : ಸಿಎಂ ಸಿದ್ದರಾಮಯ್ಯ ಟೀಕೆ

ಬೆಂಗಳೂರು : ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ಮೌಲ್ಯ ಹಾಳು ಮಾಡಿ, ಚುನಾವಣಾ ಆಯೋಗ ಮತ್ತು ಸಿಬಿಐ ಸೇರಿ ಕೇಂದ್ರ ಸರ್ಕಾರದ ಅಡಿಯಾಳಾಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದಲ್ಲಿ ನಡೆದಿರುವ ಮತಗಳ್ಳತನದ ವ್ಯವಸ್ಥಿತ ಷಡ್ಯಂತ್ರ ಮತ್ತು ವ್ಯವಸ್ಥಿತ ಕಾರ್ಯತಂತ್ರವನ್ನು ದಾಖಲೆಗಳ ಸಹಿತ ಅವರು ವಿವರಿಸಿದರು.

ಬಿಜೆಪಿಯವರು ಕೇವಲ ಸುಳ್ಳಿನಲ್ಲಿ ಮಾತ್ರವಲ್ಲ, ಮತಗಳ್ಳತನದಲ್ಲೂ ನಿಸ್ಸೀಮರು ಎನ್ನುವುದು ಸಾಬೀತಾಗಿದೆ. ನಾವು ಇದನ್ನು ಸಹಿಸುವುದಿಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟದ ಮಾರ್ಗ ಹಿಡಿಯುತ್ತೇವೆ ಎಂದರು.

ಇದನ್ನು ಓದಿ: ಬಿಹಾರ ಚುನಾವಣೆ : ಮೊದಲ ಹಂತದಲ್ಲಿ ಶೇ.60ರಷ್ಟು ಮತದಾನ

ಬಿಜೆಪಿ ಮತಗಳ್ಳತನದ ಮೂಲಕ ಅನೇಕ ವಿಧಾನಸಭೆಗಳು ಮತ್ತು ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವುದು ಸ್ಪಷ್ಟವಾಗಿ ಗೊತ್ತಾಗಿದೆ. ಲೋಕಸಭೆ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ನಿರಂತರ ಅಧ್ಯಯನ, ಪರಿಶೀಲನೆ ಬಳಿಕ ದಾಖಲೆ ಸಮೇತ ಮತಗಳ್ಳತನವನ್ನು ದೇಶದ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಸಂವಿಧಾನ ಬಾಹಿರವಾಗಿ ಅಧಿಕಾರ ಹಿಡಿಯುವುದು ಸಂವಿಧಾನಕ್ಕೆ ಎಸಗುವ ದ್ರೋಹ. ರಾಹುಲ್ ಗಾಂಧಿಯವರು, ಬೆಂಗಳೂರು ಕೇಂದ್ರ ಲೋಕಸಭೆ ಚುನಾವಣೆಯಲ್ಲಿ ನಡೆದ ಮತಗಳ್ಳತನವನ್ನು ಸ್ಪಷ್ಟವಾಗಿ, ದಾಖಲೆ ಸಮೇತ ಬಯಲಿಗೆ ಎಳೆದು ದಾಖಲೆಗಳನ್ನು ದೇಶದ ಜನರ ಮುಂದೆ ಇಟ್ಟಿದ್ದಾರೆ. ಇಷ್ಟಾದರೂ ಚುನಾವಣಾ ಆಯೋಗ ನಾವು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ, ದೇಶದ ಜನರ ಮುಂದೆ ಇರಿಸಿದ ದಾಖಲೆಗಳಿಗೂ ಉತ್ತರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದ್ದರಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕಾಪಾಡಲು ಕಾಂಗ್ರೆಸ್ ಪಕ್ಷದಿಂದ ಕೋಟಿಗೂ ಅಧಿಕ ಮಂದಿಯ ಸಹಿ ಸಂಗ್ರಹ ಮಾಡಲಾಗಿದೆ. ಇದನ್ನು ಚುನಾವಣಾ ಆಯೋಗ ಮತ್ತು ರಾಷ್ಟ್ರಪತಿಗಳಿಗೂ ನೀಡಲಾಗುವುದು ಎಂದರು.
ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೂ ಸಚಿವರೂ ಆದ ಸತೀಶ್ ಜಾರಕಿಹೊಳಿ, ಪಕ್ಷದ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್, ಸಲೀಂ ಅಹಮದ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಸೇರಿ ಪಕ್ಷದ ಮುಖಂಡರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags:
error: Content is protected !!