ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪರ ಎಲ್ಲಾ ಮಂತ್ರಿಗಳು ನಿಲ್ಲಬೇಕು ಎಂದು ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲರಿಂದ ಕರೆ ಬಂದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಪಾದಯಾತ್ರೆ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬಗ್ಗೆ ಬಿಜೆಪಿಯವರು ಅನವಶ್ಯಕವಾಗಿ ಆಪಾದನೆ ಮಾಡುತ್ತಿದ್ದಾರೆ. ಪಾದಯಾತ್ರೆ ಮಾಡಿ ಜನರಿಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಆರೋಪ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಚಿವರು ಹಾಗೂ ಶಾಸಕರು ಸಿಎಂ ಸಿದ್ದರಾಮಯ್ಯ ಪರ ನಿಲ್ಲಬೇಕು ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ವೇಣುಗೋಪಾಲ್ ಅವರಿಂದ ನಮಗೆ ಕರೆ ಬಂದಿದೆ. ನಾವೆಲ್ಲಾ ಸಿಎಂ ಸಿದ್ದರಾಮಯ್ಯ ಪರ ನಿಲ್ಲುತ್ತೇವೆ.
ಬಿಜೆಪಿ-ಜೆಡಿಎಸ್ ನಾಯಕರು ಪಾದಯಾತ್ರೆ ಮಾಡುವ ಸ್ಥಳಗಳಿಗೆ ಹೋಗಿ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಬಿಜೆಪಿ ಸರ್ಕಾರದಲ್ಲಿ ಆಗಿದ್ದ ಹಗರಣಗಳ ಬಗ್ಗೆಯೂ ಹೇಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜನಸಾಮಾನ್ಯರಿಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅವರ ಮಾತಿಗೆ ಯಾರೂ ತಲೆಕಡೆಸಿಕೊಳ್ಳಬೇಡಿ ಎಂದು ಜನತೆಗೆ ಮನವಿ ಮಾಡಿದರು.