ಬೆಂಗಳೂರು: ತಾವು ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಕೆಲವರು ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ವಿರೋಧಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಸೋಬಡಿ ಬೇಟೆಯ ಆ ದಿನಗಳು
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹೈಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಈ ಬಗ್ಗೆ ಸಿಎಂ ಈಗಾಗಲೇ ಉತ್ತರ ನೀಡಿದ್ದಾರೆ. ಪ್ರತಾಪ್ ಸಿಂಹ ಅವರನ್ನು ಅವರ ಪಕ್ಷವೇ ಕಡೆಗಣಿಸಿದೆ. ಪಾಪ ಆತನಿಗೂ ರಾಜಕೀಯ ಮಾಡಬೇಕಿದೆ. ಹೀಗಾಗಿ ತನ್ನ ಅಸ್ತಿತ್ವ ತೋರಿಸಿಕೊಳ್ಳಲು ಹೀಗೆಲ್ಲಾ ಮಾಡುತ್ತಿದ್ದಾರೆ. ಈ ಬಗ್ಗೆ ಕೋರ್ಟ್ ವಿಚಾರಣೆ ಮಾಡಿ, ತೀರ್ಮಾನ ಮಾಡಲಿದೆ ಎಂದರು.
ನಾಡಹಬ್ಬ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಗ್ಗೆ ಕೇಳಿದಾಗ, ಇದರ ಹೊರತಾಗಿ ರಾಜಕೀಯ ಮಾಡಲು ಅವರಿಗೆ ಬೇರೆ ವಿಚಾರ ಇಲ್ಲ. ಅವರಿಗೆ ರಾಜ್ಯದ ಬಗ್ಗೆ ಕಾಳಜಿ ಇದ್ದರೆ ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಬೆಂಗಳೂರು ಅಭಿವೃದ್ಧಿಗೆ ಅನುದಾನ, ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಅನುಮತಿ, ನರೇಗಾ ಅನುದಾನ ಕೊಡಿಸಲಿ. ಅದನ್ನು ಬಿಟ್ಟು ಈ ರೀತಿ ಖಾಲಿ ಮಾತು ಆಡೋದು ಬೇಡ. ಕೇವಲ ಪ್ರಚಾರಕ್ಕೆ ಅವರೆಲ್ಲ ಹೀಗೆ ರಾಜಕೀಯ ಮಾಡುತ್ತಾರೆ ಎಂದು ಹರಿಹಾಯ್ದರು.





