ಬೆಂಗಳೂರು: ರಾಜ್ಯ ಬಿಜೆಪಿ ಘಟಕದೊಳಗೆ ಉಂಟಾಗಿದ್ದ ಭಿನ್ನಮತವನ್ನು ಶಮನಗೊಳಿಸಲು ರಾಜ್ಯಕ್ಕೆ ಆಗಮಿಸಿದ್ದ ಉಸ್ತುವಾರಿ ರಾಧಾಮೋಹನ್ ದಾಸ್ ಎದುರೇ ಇಬ್ಬರು ಪ್ರಭಾವಿ ನಾಯಕರು ಜಟಾಪಟಿ ನಡೆಸಿ ಮಾತಿಗೆ ಮಾತು ಬೆಳೆಸಿರುವ ಘಟನೆ ನಡೆದಿದೆ.
ಪಕ್ಷದ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್, ಸಹ ಉಸ್ತುವಾರಿ ಸುಧಾಕರ್ ಸೇರಿದಂತೆ ಕೋರ್ ಕಮಿಟಿಯ ಸದಸ್ಯರಾದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ, ಸಂಸದ ಬಸವರಾಜ ಬೊಮಾಯಿ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯ ಮಧ್ಯೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಮಾಜಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ನಡುವೆ ಜಟಾಪಟಿ ನಡೆದು ಮಾತಿಗೆ ಮಾತು ಬೆಳೆದಿದೆ.
ಒಂದು ಹಂತದಲ್ಲಿ ಏಕವಚನ ಪದ ಪ್ರಯೋಗ ಬಳಸಿದ ಇಬ್ಬರು ನಾಯಕರೂ ಸಭೆಯಿಂದ ಹೊರ ನಡೆಯಲು ಮುಂದಾದಾಗ ಮಧ್ಯಪ್ರವೇಶ ಮಾಡಿದ ಅಶೋಕ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಕೊನೆಗೆ ವಿಜಯೇಂದ್ರ ಮತ್ತು ಅಶ್ವತ್ಥ ನಾರಾಯಣ ಅವರಿಂದ ಬೇಸತ್ತ ರಾಧಾಮೋಹನ್ ದಾಸ್ ಮೌನವಾಗಿರುವಂತೆ ತಾಕೀತು ಮಾಡಿದರು.
ಇನ್ನು ಸಭೆಯಲ್ಲಿ ಮಾಜಿ ಸಂಸದ ಶ್ರೀರಾಮುಲುಗೆ ರಾಧಾ ಮೋಹನ್ ದಾಸ್ ಕ್ಲಾಸ್ ತೆಗೆದುಕೊಂಡಿರುವ ವಿಚಾರ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಇತ್ತೀಚೆಗೆ ನಡೆದ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಂಗಾರು ಹನುಮಂತು ಸೋಲಿನ ಕುರಿತು ಸುದೀರ್ಘ ಚರ್ಚೆ ನಡೆಯಿತು. ಈ ವೇಳೆ ರಾಧಾ ಮೋಹನ್ ದಾಸ್ ಅವರು ಶ್ರೀರಾಮುಲು ಅವರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನೀವು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಸರಿಯಾಗಿ ಕಾರ್ಯನಿರ್ವಹಣೆ ಮಾಡಿಲ್ಲ ಎಂಬ ದೂರು ಬಂದಿದೆ. ಇದಕ್ಕೆ ಉತ್ತರಿಸಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ವೇಳೆ ಶ್ರೀರಾಮುಲು ಅವರು ಬೇಸರದಿಂದಲೇ ಬಿಜೆಪಿ ಕಚೇರಿಯಿಂದ ಹೊರಟ ಘಟನೆ ಕೂಡ ನಡೆದಿದೆ.