ಬೆಂಗಳೂರು : ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆಯಾದ ರೌಡಿಶೀಟರ್ ಬಿಕ್ಲು ಶಿವು ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಅನಿಲ್‍ಗೂ, ನನಾಗಲೀ ಇಲ್ಲವೇ ನಮ್ ಕುಟುಂಬಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜ್ ಸ್ಪಷ್ಟಪಡಿಸಿದ್ದಾರೆ.
ಪೊಲೀಸರಿಂದ ಬಂಧನಕ್ಕೊಳಗಾಗಿರುವ ಅನಿಲ್ ತಮ್ಮ ಸಹೋದರ ಮಗನೆಂದು ಮಾಧ್ಯಮಗಳದಲ್ಲಿ ಬಿತ್ತರಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾದ ಮಾತು. ಆತ ಯಾರೆಂಬುದೇ ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ನಮ್ಮ ಸಹೋದರನ ಮಗ ಶಾಮೀಲಾಗಿದ್ದಾರೆ ಎಂದು ಅನಗತ್ಯವಾಗಿ ರಾಜಕೀಯ ದುರುದ್ದೇಶದಿಂದ ಕೆಲವರು ಅವರ ಚಾರಿತ್ರ್ಯವಧೆ ಮಾಡಲು ಷಡ್ಯಂತ್ರ ನಡೆಸಿದ್ದಾರೆ. ನಮ್ಮ ಸಹೋದರನ ಮಗನಿಗೂ ಇದಕ್ಕೂ ಸಂಬಂಧವಿಲ್ಲ. ಅನಗತ್ಯವಾಗಿ ಇಂತಹ ವಿಷಯಗಳು ಏಕೆ ಮುನ್ನೆಲೆಗೆ ಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಸಂಪೂರ್ಣವಾಗಿ ತನಿಖೆಗೆ ಸಹಕಾರ ಕೊಟ್ಟಿದ್ದೇನೆ. ರಾಜಕೀಯ ಪ್ರೇರಿತ ಈ ಪ್ರಕರಣವನ್ನು ಹೇಗೆ ಎದುರಿಸಬೇಕೆಂಬುದು ನನಗೆ ಗೊತ್ತಿದೆ. ಇಂತಹ ಷಡ್ಯಂತ್ರಗಳನ್ನು ಎದುರಿಸಿಯೇ ನಾನು ಮೇಲಕ್ಕೆ ಬಂದಿದ್ದೇನೆ. . ಇದಕ್ಕೆಲ್ಲಾ ಹೆದರುವ ಜಾಯಮಾನದವನಲ್ಲ ಎಂದು ಅವರು ಹೇಳಿದ್ದಾರೆ.
ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ. ಸೂಕ್ತ ಕಾಲದಲ್ಲಿ ಎಲ್ಲಾ ದಾಖಲಗಳೊಂದಿಗೆ ಮಾಧ್ಯುಮಗಳ ಮುಂದೆ ಬರುತ್ತೇನೆ. ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ದೇಶದ ಕಾನೂನಿಗೆ ತಲೆಬಾಗುತ್ತೇನೆ. ಪೊಲೀಸರ ವಿಚಾರಣೆಗೆ ಹಿಂದೆಯೂ ಸಹಕಾರ ಕೊಟ್ಟಿದ್ದೇನೆ , ಮುಂದೆಯೂ ಕೊಡುತ್ತೇನೆ. ಇದಕ್ಕೆಲ್ಲ ಹೆದರಿ ಕೂರುವ ಜಾಯಮಾನ ನನ್ನದಲ್ಲ. ಏನೇ ಬಂದರೂ ಎದುರಿಸಲು ಸಿದ್ಧನಿದ್ದೇನೆ ಎಂದು ಬೈರತಿ ಬಸವರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





