ಬನ್ನೇರುಘಟ್ಟ : ಹುಲಿ ಸಫಾರಿ, ಸಸ್ಯಹಾರಿ ಪ್ರಾಣಿಗಳ ಸಫಾರಿ, ಸಿಂಹ ಸಫಾರಿ, ಕರಡಿ ಸಫಾರಿ ಇರುವ ಬನ್ನೇರುಘಟ್ಟ ಉದ್ಯಾನದಲ್ಲಿ ನೂತನವಾಗಿ ನಿರ್ಮಿಸಿರುವ ಚಿರತೆ ಸಫಾರಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಇಂದು ಚಾಲನೆ ನೀಡಿದರು.
ಬಳಿಕ ಸಫಾರಿ ಕೇಂದ್ರದ ಕುರಿತು ಮಾಹಿತಿ ನೀಡಿದ ಸಚಿವರು, ಇದು ದಕ್ಷಿಣ ಭಾರತದ ಪ್ರಥಮ ಮತ್ತು ದೇಶದಲ್ಲಿಯೇ ಅತಿ ದೊಡ್ಡ ಚಿರತೆ ಸಫಾರಿ ಆಗಿದೆ. ಪ್ರಸ್ತುತ 8 ಚಿರತೆಗಳನ್ನು ತೆರೆದ ವನ ಪ್ರದೇಶದಲ್ಲಿ ಸಫಾರಿಗೆ ಬಿಡಲಾಗಿದೆ. ಇದು ಈ ಉದ್ಯಾನದ ಮತ್ತೊಂದು ಆಕರ್ಷಣೆಯಾಗಿದ್ದು, ಪ್ರವಾಸಿಗರು ಮತ್ತು ಸಂದರ್ಶಕರನ್ನು ಸೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ ಈ ಚಿರತೆ ಸಫಾರಿ ಪ್ರದೇಶವು ನೈಸರ್ಗಿಕ ಬಂಡೆಗಳಿಂದ ಹಾಗೂ ಅರೆ-ಎಲೆ ಉದುರುವ ಕಾಡುಗಳಿಂದ ಕೂಡಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ, 20 ಹೆಕ್ಟೇರ್ ಪ್ರದೇಶವನ್ನು ಗುರುತಿಸಿ ರೈಲ್ವೆ ಬ್ಯಾರಿಕೇಡ್ ಹಾಕಲಾಗಿದೆ. ಒಟ್ಟು 4.5 ಕೋಟಿ ರೂ. ವೆಚ್ಚದಲ್ಲಿ ಸುರಕ್ಷಿತ ವಿನ್ಯಾಸ ರೂಪಿಸಲಾಗಿದೆ. ಈ ಇಡೀ ಪ್ರದೇಶಕ್ಕೆ 4.5 ಮೀಟರ್ ಎತ್ತರದ ಲಂಬ ಚೈನ್ ಲಿಂಕ್ ಜಾಲರಿ ಅಳವಡಿಸಲಾಗಿದ್ದು, ಎಂಎಸ್ ಶೀಟ್ ಗಳನ್ನು 1.5 ಮೀಟರ್ ಎತ್ತರವಿರುವ 30ಡಿಗ್ರಿ ಇಳಿಜಾರಿನ ಕೋನದಲ್ಲಿ ಹಾಕುವ ಮೂಲಕ ಚಿರತೆಗಳು ಹೊರಗೆ ಬಾರದಂತೆ ಎಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.
ಇನ್ನು ಉದ್ಯಾನವನ ಸುತ್ತ ಮುತ್ತ ಬೆಟ್ಟಗುಡ್ಡಗಳಿದ್ದು, ಇದು ಚಿರತೆಗಳು ವಾಸಿಸಲು ಉತ್ತಮ ತಾಣವಾಗಿದೆ. ಹೀಗಾಗಿಯೇ ಇಲ್ಲಿ ಹೆಚ್ಚಿನ ಸಂಖ್ಯೆ ಚಿರತೆಗಳೂ ಇವೆ. ಈ ಪೈಕಿ ಹೊಲ, ಗದ್ದೆಗಳಲ್ಲಿ ಹೆಣ್ಣು ಚಿರತೆಗಳು ಮರಿ ಹಾಕಿ ಹೋಗುವ ಸಂದರ್ಭದಲ್ಲಿ ಅಂತಹ ಮರಿಗಳನ್ನು ತಂದು ಉದ್ಯಾನದಲ್ಲಿ ಪಾಲನೆ ಮಾಡಲಾಗುತ್ತದೆ. ಪ್ರಸ್ತುತ ಉದ್ಯಾನದಲ್ಲಿ 14 ಚಿರತೆಗಳಿವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ. ಸುನೀಲ್ ಪನ್ವಾರ್, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯಸೇನ್ ಮತ್ತಿತರರು ಉಪಸ್ಥಿತರಿದ್ದರು.