ಬೆಂಗಳೂರು: ಬೆಂಗಳೂರಿನ ರಸತೆ ಗುಂಡಿಗಳನ್ನು ಒಂದು ವಾರದೊಳಗಾಗಿ ಮುಚ್ಚಬೇಕು. ಎಲ್ಲಾ ರಸ್ತೆಗಳಿಗೂ ಒಂದು ಪದರದ ಟಾರ್ ಹಾಕುವಂತೆ ಸೂಚನೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಆರ್.ಟಿ. ಸ್ಟ್ರೀಟ್, ಚಿಕ್ಕಪೇಟೆ, ಬಳೆಪೇಟೆ, ಗಾಂಧಿನಗರ ಭಾಗದಲ್ಲಿ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರಿನ ಅಭಿವೃದ್ಧಿಗೆ 1.20 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಕೇಂದ್ರದಿಂದ ಒಂದು ರೂ.ಕೂಡ ನೆರವು ಸಿಗುತ್ತಿಲ್ಲ. ನಾಗರಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಇದನ್ನು ಓದಿ: ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಗುಂಡಿಗಳ ದರ್ಬಾರ್
ಇನ್ನೊಂದು ವಾರದಲ್ಲಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲೇ ಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಬಾರಿ ಮಳೆ ಹೆಚ್ಚಾಗಿ ಬಂದಿದ್ದದರಿಂದಾಗಿ ಗುಂಡಿಗಳನ್ನು ಮುಚ್ಚಲು ಕಷ್ಟವಾಗುತ್ತಿದೆ. ವೈಟ್ ಟಾಪಿಂಗ್ ಕಾಮಗಾರಿ ಇದಕ್ಕೆ ಪರಿಹಾರವಾಗಿದೆ. ಸದ್ಯಕ್ಕೆ ರಸ್ತೆಗಳಿಗೆ ಒಂದು ಪದರದ ಟಾರ್ ಹಾಕುವಂತೆ ಜಿಬಿಎ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ಬಾರಿ ಎಲ್ಲಾ ಶಾಸಕರಿಗೂ ಹಣ ನೀಡಲು ಬಜೆಟ್‌ನಲ್ಲಿ 8 ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಿಕೊಂಡಿದ್ದಾಗಿ ಹೇಳಿದ ಅವರು, ಗ್ರಾಮೀಣ ಹಾಗೂ ನಗರ ಪ್ರದೇಶದ ಶಾಸಕರ ಜೊತೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಶಾಸಕರ ಕ್ಷೇತ್ರಗಳಿಗೂ ಹಣ ನೀಡಲಾಗುತ್ತದೆ. ಈ ಮೂಲಕ ಸಮಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ ಎಂದು ಬಿಜೆಪಿಯವರು ಟೀಕೆ ಮಾಡುತ್ತಾರೆ. ಅವರ ಕಾಲದಲ್ಲಿ ಗುಂಡಿಗಳಿರಲಿಲ್ಲವೇ ಎಂದು ಕಿಡಿಕಾರಿದ ಮುಖ್ಯಮಂತ್ರಿ ಅವರು, ಹಿಂದೆ ನಾವು ಮಾಡಿದ ರಸ್ತೆಗಳನ್ನು ಹೊರತು ಪಡಿಸಿದರೆ ಬಿಜೆಪಿಯವರ ಯೋಗ್ಯತೆಗೆ ಆಡಳಿತ ನಡೆಸಿದಾಗ ಒಂದು ಹಿಡಿ ಮಣ್ಣು ಹಾಕಿರಲಿಲ್ಲ. ಜೊತೆಗೆ ಹಣ ಇಲ್ಲದೇ ಇದ್ದರೂ 2.10 ಲಕ್ಷ ರೂ. ವೆಚ್ಚದ ಯೋಜನೆಗಳಿಗೆ ಮಂಜೂರಾತಿ ನೀಡಿದ್ದರು. ಅದೆಲ್ಲಾ ಬಾರವೂ ನಮ ಮೇಲೆ ಬಿದ್ದಿದೆ ಎಂದು ಸಿದ್ದರಾಮಯ್ಯ ಹೇಳಿದರು.





