ಬೆಂಗಳೂರು: ಪೊಲೀಸ್ ಇಲಾಖೆ ತನ್ನ ಇತಿಹಾಸ ಮರೆತು ರಾಜಕಾರಣಿಗಳನ್ನು ಓಲೈಸಲು ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು.
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ನಡೆದ ಪೀಕ್ ಕ್ಯಾಪ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೊಲೀಸರಿಗೆ ಕೇಸರಿ ಬಟ್ಟೆ ಹಾಕಿಸಲಾಗಿತ್ತು. ಆ ಸಂದರ್ಭದಲ್ಲಿ ಯಾವ ಅಧಿಕಾರಿ ಇದ್ದರೋ ಗೊತ್ತಿಲ್ಲ. ಆದರೆ ರಾಜಕಾರಣಿಗಳನ್ನು ಓಲೈಸಲು ಪೊಲೀಸರು ತಮನ್ನು ತಾವು ಮಾರಿಕೊಂಡಂತೆ ವೇಷ ಬದಲಾಯಿಸಬಾರದು. ಪೊಲೀಸರು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಜನರ ನಂಬಿಕೆ ಕಳೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಅದಕ್ಕೆ ಅವಕಾಶವಿಲ್ಲ ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜ್ಯದಲ್ಲಿ 16 ಸಾವಿರ ಪೊಲೀಸ್ ಕಾನ್ಸ್‌ಟೇಬಲ್‌ಗಳ ಹುದ್ದೆ ಖಾಲಿ ಇದ್ದು, ಅವುಗಳಲ್ಲಿ 8500 ಹುದ್ದೆಗಳ ನೇಮಕಕ್ಕೆ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿಗಳ ಪೀಕ್‌ಕ್ಯಾಪ್ ಬದಲಾವಣೆ ಐತಿಹಾಸಿಕ ನಿರ್ಧಾರವಾಗಿದ್ದು, ಇದನ್ನು ತಮ್ಮ ಅವಧಿಯಲ್ಲಿ ಕೈಗೊಂಡಿರುವುದು ಸಂತಸದ ವಿಚಾರ. ಲಂಡನ್, ಆಸ್ಟ್ರೇಲಿಯಾದಲ್ಲಿ ಸ್ಲೋಜ್ ಹ್ಯಾಟ್ ಧರಿಸಲಾಗುತ್ತಿತ್ತು. 1953ರಲ್ಲಿ ಭಾರತದ ಸಶಸ್ತ್ರ ಪಡೆಗಳಿಗೂ ಸ್ಲೋಜ್ ಹ್ಯಾಟ್ ನಿಗದಿಪಡಿಸಲಾಗಿತ್ತು ಎಂದು ಹೇಳಿದರು.





