ಬಳ್ಳಾರಿ: ಕನ್ನಡದ ಅಸ್ಮಿತೆ ಪ್ರತಿಬಿಂಬಿಸಲು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕನ್ನಡಾಭಿಮಾನಿಗಳಿಗೆ ಅವಕಾಶ ದೊರೆತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಹೇಳಿದರು.
ಈ ಬಾರಿ ಬಳ್ಳಾರಿಯಲ್ಲಿ ಜರುಗಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆಗಾಗಿ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನುಡಿಹಬ್ಬ, ಕನ್ನಡದ ಜಾತ್ರೆ ಇದ್ದಂತೆ. 68 ವರ್ಷಗಳ ಬಳಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಕನ್ನಡ ಸಾಹಿತ್ಯಕಾರರು, ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಮಾಧ್ಯಮದವರ ಪರಸ್ಪರ ಸಹಕಾರ ಮತ್ತು ಸಹಭಾಗಿತ್ವ ಅಗತ್ಯವಿದೆ ಎಂದರು.
ಇದನ್ನೂ ಓದಿ: ಕನ್ನಡ ಸಾಹಿತ್ಯ ಲೋಕ ತಮಿಳು ಸಾಹಿತ್ಯಕ್ಕಿಂತ ಮಿಗಿಲಾಗಿದೆ: ಶಾಸಕ ಕೆ.ಹರೀಶ್ ಗೌಡ
ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ ತಿಂಗಳಿನಲ್ಲಿ ಆಯೋಜಿಸಲು ಸೂಕ್ತ ಎಂದು ಸರ್ಕಾರದ ಗಮನಕ್ಕೆ ತರಲಾಗಿದೆ. ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲು ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಳ್ಳಬೇಕು. ಇದರಲ್ಲಿ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.





