Mysore
28
few clouds

Social Media

ಶುಕ್ರವಾರ, 30 ಜನವರಿ 2026
Light
Dark

ನಾಳೆಯಿಂದ ಬೆಳಗಾವಿಯ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ 

ಬೆಂಗಳೂರು: ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಆಯೋಜಿಸಲಾಗಿದೆ.

ಸುಮಾರು ಆರು ಸಾವಿರ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಸುವರ್ಣ ಸೌಧದ ಸುತ್ತಮುತ್ತ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಅದೇ ಮಾದರಿಯಲ್ಲಿ ಬೇರೆಬೇರೆ ರಾಜ್ಯಗಳ ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಯುವ ಮುನ್ಸೂಚನೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿಯೇ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಕಬ್ಬು ಬೆಳೆಗಾರರ ಪ್ರತಿಭಟನೆ ತಾತ್ಕಾಲಿಕವಾಗಿ ಶಮನವಾಗಿದ್ದರೂ, ಬೇಡಿಕೆ ಇನ್ನೂ ಪೂರ್ಣವಾಗಿ ಈಡೇರಿಲ್ಲ. ಹೀಗಾಗಿ ಬಾಗಲಕೋಟೆ ಹಾಗೂ ಇತರ ಜಿಲ್ಲೆಗಳ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

ಮೆಕ್ಕೆಜೋಳ, ಹೆಸರು ಕಾಳು ಬೆಲೆ ಕುಸಿತ ವಾಗಿರುವುದು ರೈತರನ್ನು ಕಂಗಡಿಸಿದೆ. ಹೀಗಾಗಿ ಬೆಳೆಗಾರರು ಪ್ರತಿಭಟನೆ ನಡೆಸುವ ಅಂದಾಜಿದೆ.ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಎರಡುವರೆ ಲಕ್ಷ ಹುದ್ದೆಗಳ ನೇಮಕಾತಿಗಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಇತ್ತೀಚೆಗೆ ಉದ್ಯೋಗ ಆಕಾಂಕ್ಷಿಗಳು ಹುಬ್ಬಳ್ಳಿ ಧಾರವಾಡದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದರು. ಅದರ ಪರಿಣಾಮ ಮತ್ತೆ ಬೆಳಗಾವಿಯಲ್ಲಿಯೂ ಪ್ರತಿಭಟನೆಯಾಗುವ ಸಾಧ್ಯತೆ ಇದೆ. ಒಳ ಮೀಸಲಾತಿಯ ಗೊಂದಲಗಳು ಇನ್ನೂ ಜೀವಂತವಾಗಿವೆ, ಹೀಗಾಗಿ ಕೆಲವು ಪರಿಶಿಷ್ಟ ಸಮುದಾಯದ ಸಂಘಟನೆಗಳ ಪ್ರತಿಭಟನೆಯೂ ನಡೆಯಬಹುದಾಗಿದೆ.

ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿಗಳ ದಿನಗೂಲಿ ನೌಕರರು ವೇತನ ಪರಿಸ್ಕಾರಣೆ ವೇತನ ಪಾವತಿಯಂತಹ ಸಮಸ್ಯೆಗಳಿಗಾಗಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.ಈ ಹಿನ್ನೆಲೆಯಲ್ಲಿ ನಾಳೆಯಿಂದ ಬೆಳಗಾವಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಬಾರಿ ಬಂದೋಬಸ್ತ್ ಆಯೋಜಿಸಲಾಗಿದೆ. ಮಹಾರಾಷ್ಟ್ರ ಬೆಂಬಲಿತ ಸಂಘಟನೆಗಳು ಮತ್ತೊಮ್ಮೆ ತಗಾದೆ ತೆಗೆಯುವ ಆತಂಕವು ಇದೆ.

ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿಯಾಗಿಲ್ಲ ಎಂಬ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯದ ಬೇಡಿಕೆಯು ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳು ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ತಮ್ಮ ಹಕ್ಕೋತಾಯಕ್ಕಾಗಿ ಬೀದಿಗೆ ಇಳಿಯುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರ ಎಲ್ಲಾ ರೀತಿಯ ಭದ್ರತೆಗಳನ್ನು ಕೈಗೊಂಡಿದೆ. ಸಂಘಟನೆಗಳ ಪ್ರತಿಭಟನೆಗಳು ಒಂದೆಡೆಯಾದರೆ ಭಯೋತ್ಪಾದಕರ ದಾಳಿಯ ಮುನ್ನೆಚ್ಚರಿಕೆಯೂ ಭದ್ರತಾ ಸವಾಲನ್ನು ಹೆಚ್ಚಿಸಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಅಧಿಕಾರಿಗಳು ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

Tags:
error: Content is protected !!