Mysore
29
scattered clouds

Social Media

ಗುರುವಾರ, 13 ಫೆಬ್ರವರಿ 2025
Light
Dark

ಬೆಳಗಾವಿ | ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಸ್ಪತ್ರೆಯಿಂದ ಬಿಡುಗಡೆ

ಬೆಳಗಾವಿ: ರಸ್ತೆ ಅಪಘಾತದಿಂದಾಗಿ ಕಳೆದ 13 ದಿನಗಳಿಂದ ವಿಜಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಇಂದು ಬಿಡುಗಡೆಯಾದರು.

ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಸ್ತೆ ಅಪಘಾತದಲ್ಲಿ ಬದುಕಿ ಬಂದಿದ್ದು ನನಗೆ ಪುನರ್ಜನ್ಮ ಬಂದಂತಾಗಿದೆ. ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಆದರೆ, ಸಚಿವೆಯಾಗಿ ನನಗೂ ಜವಾಬ್ದಾರಿ ಇದೆ. ಮಾರ್ಚ್ ತಿಂಗಳಲ್ಲಿ ಬಜೆಟ್ ಕೂಡ ಇದೆ. ಮಹಿಳಾ ಮತ್ತು ಮಕ್ಕಳ ಇಲಾಖೆ ಕೂಡ ಚನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಮೂರು ವಾರ ವಿಶ್ರಾಂತಿ ಹೇಳಿದ್ದಾರೆ. ಆದಷ್ಟು ಬೇಗ ಸಾರ್ವಜನಿಕ ಜೀವನಕ್ಕೆ ಮರಳುತ್ತೇನೆ ಎಂದು ಸಚಿವರು ತಿಳಿಸಿದರು.

ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ ಸಚಿವೆ
ಕಳೆದ 13 ದಿನಗಳಿಂದ ಚಿಕಿತ್ಸೆ ನೀಡಿದ ವಿಜಯ ಆಸ್ಪತ್ರೆ ವೈದ್ಯ ಡಾ. ರವಿ ಪಾಟೀಲ್ ಅವರಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು. ಕಳೆದ 13 ದಿನಗಳು ನನಗೆ ಆಸ್ಪತ್ರೆಗಿಂತ ಮನೆಯಂತೆ ಭಾಸವಾಯಿತು. ನನ್ನ ಕುಟುಂಬಕ್ಕಿಂತ ಹೆಚ್ಚಾಗಿ ನನ್ನನ್ನು ನೋಡಿಕೊಂಡರು. ನನ್ನ ಕಷ್ಟದ ಸಮಯದಲ್ಲಿ, ವೈದ್ಯರು ನನ್ನ ಪಕ್ಕದಲ್ಲಿ ನಿಂತು, ಬೆಂಬಲ ಮತ್ತು ಕಾಳಜಿಯನ್ನು ತೋರಿದರು. ವೈದ್ಯರ ದಯೆ, ತಾಳ್ಮೆ ಮತ್ತು ಸಮರ್ಪಣೆ ಹೃದಯಸ್ಪರ್ಶಿಯಾಗಿತ್ತು. ಧೈರ್ಯ ಕಳೆದುಕೊಳ್ಳದಂತೆ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ನನ್ನ ಜೊತೆ ನಿಂತರು ಎಂದು ಸಚಿವರು ಹೇಳಿದರು.

ನನ್ನ ಪುಣ್ಯವೇನೋ ಗೊತ್ತಿಲ್ಲ, ಇಲ್ಲಿನ ವೈದ್ಯರ ಕಾಳಜಿಯಿಂದ ಬೇಗ ಗುಣಮುಖ ಆದೆ. ಅಪಘಾತದ ಭಾವನೆ, ಆತಂಕ ಬಾರದಂತೆ ನೋಡಿಕೊಂಡರು, ಧೈರ್ಯ ತುಂಬಿದರು. ತಾಯಿ, ತಮ್ಮ, ಸೊಸೆ, ಮಗ ಕುಟುಂಬ ಸದಸ್ಯರಿಗೆ ಧನ್ಯವಾದ ಹೇಳುವೆ ಎಂದರು.

ಕಾರ್ಯಕರ್ತರು, ಕ್ಷೇತ್ರದ ಜನರಿಗೆ ಋಣಿ
ಆಸ್ಪತ್ರೆಯಲ್ಲಿದ್ದ ವೇಳೆ ನನ್ನ ಚೇತರಿಕೆಗೆ ಹಾರೈಸಿದ ನಾಡಿನ ಮಠಾಧೀಶರು, ಕಾರ್ಯಕರ್ತರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನತೆ, ಬೆಳಗಾವಿ ಜಿಲ್ಲೆಯ ಜನರಿಗೆ ಋಣಿಯಾಗಿದ್ದೇನೆ. ಪೂಜೆ ಪುನಸ್ಕಾರಗಳನ್ನು ಮಾಡುವ ಮೂಲಕ ನನ್ನ ಚೇತರಿಕೆಗೆ ಹಾರೈಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಸಚಿವ ಸಂಪುಟದ ಸಹೋದ್ಯೋಗಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ನಾಯಕರು ನನ್ನನ್ನು ಭೇಟಿಯಾಗಿ ಧೈರ್ಯ ತುಂಬಿದರು. ಅವರಿಗೆ ಎಂದಿಗೂ ಕೃತಜ್ಞಳಾಗಿರುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಕಲ್ಲು ಹೃದಯದವರ ಆರೋಪಕ್ಕೆ ಉತ್ತರವಿಲ್ಲ
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಹಣವಿತ್ತು ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಲ್ಲು ಹೃದಯದವರು, ಹೃದಯ ಇಲ್ಲದವರಿಗೆ ಉತ್ತರ ಕೊಡಲ್ಲ. ಸಾವಿನಲ್ಲೂ ರಾಜಕೀಯ ಮಾಡುವವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.

ಸಕ್ರಾಂತಿ ದಿನ ಬೆಳಗ್ಗೆ 7 ಗಂಟೆಯೊಳಗೇ ಮಲಪ್ರಭಾ ನದಿಯಲ್ಲಿ ಪುಣ್ಯಸ್ನಾನ ಮಾಡೋಣ ಅಂತ ಜನವರಿ 13ರಂದು ರಾತ್ರಿ 10.30ರ ವೇಳೆಗೆ ನಿರ್ಧಾರ ಮಾಡಿ ಬೆಂಗಳೂರಿನಿಂದ ಹೊರಡಲಾಯಿತು. ಬಳಿಕ ಕುಟುಂಬ ಸದಸ್ಯರೊಂದಿಗೆ ಹಿರೇಹಟ್ಟಿಹೊಳಿಗೆ ಹೋಗಲು ತೀರ್ಮಾನಿಸಿದ್ದೇವು. ಪ್ರವಾಸ ದಿಢೀರ್ ನಿರ್ಧಾರ ಆಗಿದ್ದಕ್ಕೆ ಬೆಂಗಾವಲು ಪಡೆ ತೆಗೆದುಕೊಂಡಿರಲಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಬಿಜೆಪಿ ನಾಯಕರ ಆರೋಪಕ್ಕೆ ಉತ್ತರ ಕೊಡಲ್ಲ. ಆರೋಪ ಮಾಡಿದವರಿಗೆ ಬುದ್ಧಿ ಭ್ರಮಣೆ ಆಗಿರಬೇಕು. ಅಪಘಾತದ ಬಳಿಕ ಪ್ರಾಣಾಪಾಯದಿಂದ ಗೆದ್ದು ಬಂದಿರುವೆ. ಚೇತರಿಕೆ ಬಳಿಕ ಸಂಪೂರ್ಣ ಸಕ್ರಿಯವಾಗಿ ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳುವೆ. ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಸಂಬಂಧ ಕಾರ್ಯಪ್ರವೃತ್ತನಾಗಿರುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮೈಕ್ರೋ ಫೈನಾನ್ಸ್ ಹಾವಳಿ ನಡೆಯುತ್ತಿರುವುದು ನನ್ನ ಗಮನಕ್ಕೆ ಆರು ತಿಂಗಳ‌ ಹಿಂದೆಯೇ ಬಂದಿತ್ತು. ಆಗಲೇ ನಾನು ನಗರ ಪೊಲೀಸ್ ಇಲಾಖೆ ಆಯುಕ್ತರ ಗಮನಕ್ಕೆ ತಂದಿದ್ದೆ. ಯಮಕನಮರಡಿಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಸೂಚಿಸಿದ್ದೆ ಎಂದರು.

ಈ ವೇಳೆ ಸಚಿವರ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ವೈದ್ಯ ರವಿ ಪಾಟೀಲ್ ಹಾಗೂ ಸಚಿವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

Tags: