ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ವಿರುದ್ಧ ಹೋರಾಟ ಮಾಡಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಜ್ಜಾಗಿದ್ದಾರೆ.
ಕರ್ನಾಟಕ ಬಿಜೆಪಿ ಮೇಲೆ ಹಿಡಿತ ಸಾಧಿಸುವ ಜೊತೆಗೆ ಬಸನಗೌಡ ಪಾಟೀಲ್ ಯತ್ನಾಳ್ ಅಂಡ್ ಟೀಂ ಹೊಸ ಬಾಂಬ್ ಸಿಡಿಸಲು ಸಜ್ಜಾಗಿದ್ದು, ಬೆಳಗಾವಿಯಲ್ಲೇ ವಿಜಯೇಂದ್ರ ವಿರುದ್ಧ ಹೋರಾಟ ಮಾಡಲು ರೆಡಿಯಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಜಂಟಿ ಪಾದಯಾತ್ರೆ ಮುಗಿಸಿರುವ ಬಿಜೆಪಿ ಹಾಗೂ ಜೆಡಿಎಸ್‌ಗೆ ಈಗ ಮತ್ತೊಂದು ಕಂಟಕ ಎದುರಾಗಿದೆ.
ಪಾದಯಾತ್ರೆಯಲ್ಲಿ ಭಾಗವಹಿಸದೇ ದೂರ ಉಳಿದಿರುವ ರಮೇಶ್ ಜಾರಕಿಹೊಳಿ ಹಾಗೂ ಯತ್ನಾಳ್ ಹೊಸ ಬಾಂಬ್ ಸಿಡಿಸಲು ಸಜ್ಜಾಗಿದ್ದಾರೆ.
ಇದರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರೇ ಟಾರ್ಗೆಟ್ ಆಗಿದ್ದು, ಅವರಿಬ್ಬರ ವಿರುದ್ಧ ಹೊಸ ರಣತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.
ರಾಜ್ಯಾಧ್ಯಕ್ಷ ಹುದ್ದೆಯನ್ನು ವಿಜಯೇಂದ್ರಗೆ ಕೊಟ್ಟ ಬಳಿಕ ಬಿಜೆಪಿ ನಾಯಕರಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ಈಗ ಅದು ಇನ್ನಷ್ಟು ಹೆಚ್ಚಾಗುತ್ತಾ ಹೋಗಿದೆ.
ಇದರ ಜೊತೆ ಜೊತೆಗೆ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧವೂ ರೆಬೆಲ್ ಶಾಸಕರು ಅಸಮಾಧಾನ ಹೊರಹಾಕಿದ್ದು, ಬಿಜೆಪಿಯಲ್ಲಿ ಭಾರೀ ಬದಲಾವಣೆಯ ಗಾಳಿ ಬೀಸಲಿದೆ ಎನ್ನಲಾಗುತ್ತಿದೆ.