ಬೆಂಗಳೂರು : ಈ ಬಾರಿಯ ನಾಡಹಬ್ಬ ಮೈಸೂರು ದಸರಾವನ್ನು ಅಂತರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್.ಸಿ ಮಹದೇವಪ್ಪ ಗೊಂದಲಗಳಿಗೆ ತೆರೆ ಏಳಿದಿದ್ದಾರೆ.
ಬಾನು ಮುಸ್ತಾಕ್ ಅವರಿಂದ ಮೈಸೂರು ದಸರಾ ಉದ್ಘಾಟನೆಗೆ ಕೆಲವು ಬಲಪಂಥೀಯರು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಾದೇವಪ್ಪನವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಿಗಧಿಯಾಗಿರುವಂತೆ ದಸರಾ ಹಬ್ಬವನ್ನು ಬಾನು ಮುಷ್ತಾಕ್ ಉದ್ಘಾಟನೆ ಮಾಡಲಿದ್ದಾರೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸ್ಪಷ್ಟನೆ ನೀಡಿರುವುದರಿಂದ ಪುನಃ ಇದರ ಬಗ್ಗೆ ಚರ್ಚೆ ಅನಗತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವರು ವಿರೋಧಕ್ಕಾಗಿ ವಿರೋಧಿಸುತ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ವಿರೋಧಿಗಳಿಗೆ ನೀಡಿದರು.
ಒಳ ಮೀಸಲಾತಿಯಲ್ಲಿ ಬಂಜಾರ, ಕೊರಮ, ಕೊರಚ, ಹಾಗೂ ಲಂಬಾಣಿ ಸೇರಿದಂತೆ ಕೆಲವು ಸಮುದಾಯಗಳು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಸಿದ ಸಚಿವರು, ಇದರಲ್ಲಿ ಯಾರಿಗೂ ಅನ್ಯಾಯವಾಗಿಲ್ಲ ಎಲ್ಲವೂ ಕಾನೂನು ಬದ್ಧವಾಗಿ ಮಾಡಿದ್ದೇವೆ ಎಂದು ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡರು.
ಹೋರಾಟ ಮಾಡುವುದು ಅವರ ಹಕ್ಕು ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ತನಗೆ ಅನ್ಯಾಯವಾಗಿದೆ ಎಂದಾಗ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸಲು ಪ್ರತಿಭಟನೆ ಮಾಡಲು ಅವಕಾಶವನ್ನು ಸಂವಿಧಾನವೇ ನೀಡಿದೆ ಎಂದು ಹೇಳಿದರು.
ಈ ಸಮುದಾಯಕ್ಕೆ ಹೋರಾಟ ಮಾಡಲು ಬಿಜೆಪಿಯವರು ಕೊಟ್ಟಿಲ್ಲ ಚುನಾವಣಾ ಸಂದರ್ಭದಲ್ಲಿ ರಾಮ, ಭೀಮ, ಉರಿಗೌಡ ನಂಜೇಗೌಡ ಮತ್ತಿತರ ವಿಷಯಗಳನ್ನು ಮುನ್ನೆಲೆಗೆ ತಂದಿದ್ದರು. ರಾಜ್ಯದ ಜನತೆ ಅಂತಿಮವಾಗಿ ಯಾರಿಗೆ? ತೀರ್ಪು ನೀಡಿದ್ದಾರೆ ಎಂದು ಪ್ರಶ್ನೆ ಮಾಡಿದರು.
2023ರ ವಿಧಾನಸಭೆ ಚುನಾವಣೆಗೂ ಮುನ್ನ ನಾವು ಪರಿಶಿಷ್ಟ ಪಂಗಡದವರಿಗೆ ಒಳ ಮೀಸಲಾತಿಯನ್ನು ಜಾರಿ ಮಾಡುತ್ತೇವೆ ಎಂದು ಚಿತ್ರದುರ್ಗದ ಸಭೆಯಲ್ಲಿ ಘೋಷಣೆ ಮಾಡಿದ್ದೆವು. ಅದರಂತೆ ಈ ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲಿ ಕೊಟ್ಟಿದ್ದಾರೆ. ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಹೇಳಿದರು.
ಪರಿಶಿಷ್ಟ ಪಂಗಡಕ್ಕೆ ಶೇಕಡ 17ರಷ್ಟು ಮೀಸಲಾತಿಯನ್ನು ಹೆಚ್ಚಳ ಮಾಡಿದ್ದೇವೆ ಇದಕ್ಕಾಗಿ ಹೈಕೋರ್ಟ್ ನಿವೃತ್ತಿ ನ್ಯಾಯಮೂರ್ತಿ ಹೆಚ್ ಎನ್ ನಾಗ್ ಮೋಹನ್ ದಾಸ್ ನೇತೃತ್ವದ ಆಯೋಗದ ವರದಿಯ ಶಿಫಾರಸನ್ನು ಸರ್ಕಾರ ಅನುಷ್ಠಾನ ಮಾಡಿದೆ. ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.





