Mysore
29
broken clouds

Social Media

ಸೋಮವಾರ, 15 ಜೂನ್ 2026
Light
Dark

ಮುಂದಿನ ಬಜೆಟ್‌ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ : ಸಿಎಂ ಭರವಸೆ

ಉಡುಪಿ : ಬಂಟ ಸಮುದಾಯ ವಿಶ್ವದಾದ್ಯಂತ ವಿಸ್ತರಿಸಿ ಉದ್ಯಮ ಆರಂಭಿಸಿ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸಮುದಾಯವು ವಿಶಿಷ್ಟ ಸಂಸ್ಕೃತಿ, ಪರಂಪರೆ ಹೊಂದಿದ್ದು, ಕನ್ನಡ ಚರಿತ್ರೆ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡುತ್ತಿದೆ. ಮುಂದಿನ ಬಜೆಟ್‌ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಂಟರು ಸೇರಿ ಮಂಗಳೂರು, ಉಡುಪಿ ಜಿಲ್ಲೆಯವರು ಉದ್ಯಮ ಸಾಹಸಿಗಳು. ವಿಶ್ವದ ಎಲ್ಲಾ ಕಡೆ ಹರಡಿದ್ದು, ತಾವು ಹೋಗುವ ಎಲ್ಲಾ ಕಡೆ ಜನರ ಬೆರೆತು, ಸಹೃದಯತೆಯಿಂದ ಬಾಳುತ್ತಾರೆ. ಇದು ಬಂಟರ ಸಮುದಾಯದ ಹೆಗ್ಗಳಿಕೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ರೀಡೆ, ಸಿನಿಮಾ, ಶಿಕ್ಷಣ, ಹೋಟೆಲ್ ಉದ್ಯಮ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಬಂಟರು ತಮ್ಮ ಛಾಪು ಮೂಡಿಸಿದ್ದಾರೆ. ಎಲ್ಲೇ ಹೋದರೂ ತಮ್ಮ ಭಾಷೆ, ಸಂಸ್ಕೃತಿಯನ್ನು ಪಸರಿಸುತ್ತಾರೆ. ತುಳು ಮೇಲಿನ ನಿಮ್ಮ ಪ್ರೀತಿ ಮತ್ತು ಅಕ್ಕರೆ ಅನುಕರಣೀಯ. ಇದು ಹೆಮ್ಮೆಯ ವಿಚಾರ. ಪ್ರತಿಯೊಬ್ಬರು ಅವರವರ ಮಾತೃಭಾಷೆಗೆ ಗೌರವ ಕೊಡುವುದರಿಂದ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸುತ್ತದೆ ಎಂದರು.

ಬಂಟ ಸಮಾಜ ಜಾತ್ಯತೀತ ಸಮುದಾಯ. ಸರ್ವರನ್ನೂ ಸಮಾನ ಪ್ರೀತಿಯಿಂದ ಕಾಣುವ ಮಾನವೀಯ ಮೌಲ್ಯವನ್ನು ಆಚರಿಸುತ್ತಿದೆ. ಇದು ಹೆಮ್ಮೆಯ ಸಂಗತಿ. ಮನುಷ್ಯ ದ್ವೇಷವನ್ನು ಬಂಟ ಸಮುದಾಯ ಯಾವತ್ತೂ ಬೆಂಬಲಿಸುವುದಿಲ್ಲ. ಇದು ಅತ್ಯಂತ ಶ್ಲಾಘನೀಯ ಎಂದರು.‌

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!