ಬೆಂಗಳೂರು: ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವನಗುಡಿ ಹಾಗೂ ಸುತ್ತಮುತ್ತಲಿನ ರಸ್ತೆಗಳು ಕಳೆಗಟ್ಟಿವೆ.
ಕಡಲೆಕಾಯಿ ಪರಿಷೆ ಕಡೆಯ ಕಾರ್ತಿಕ ಸೋಮವಾರ ಅಂದರೆ ನಾಳೆ ನಡೆಯಲಿದ್ದು, ಈಗಾಗಲೇ ಸಡಗರ ಆರಂಭವಾಗಿದೆ.
ಬುಧವಾರದವರೆಗೂ ಪರಿಷೆ ನಡೆಯಲಿದ್ದು, ರಾಮಕೃಷ್ಣ ಆಶ್ರಮ ವೃತ್ತದಿಂದ ಬ್ಯೂಗಲ್ ರಾಕ್, ಕಾಮತ್ ಹೋಟೆಲ್, ಸರ್ಕಲ್‌ವರೆಗೆ ತರಹೇವಾರಿ ವ್ಯಾಪಾರ ಮಳಿಗೆಗಳು ಬೀಡುಬಿಟ್ಟಿವೆ.
ಹೊಸ ಪೀಳಿಗೆಗೆ ಸಾಂಪ್ರದಾಯಿಕ ಕಡೆಲೆಕಾಯಿ ಪರಿಷೆಯನ್ನು ಪರಿಚಯಿಸುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ಮತ್ತು ಮುಜರಾಯಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಇನ್ನು ಪ್ಲಾಸ್ಟಿಕ್ ಮುಕ್ತ ಪರಿಷೆ ಕೈಗೊಳ್ಳಲು ಈ ಬಾರಿ ಪಣ ತೊಡಲಾಗಿದ್ದು, ಪ್ಲಾಸ್ಟಿಕ್ ಬಳಸದಂತೆ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.