ಬೆಂಗಳೂರು: ಬಿಜೆಪಿಯೂ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುವ ನೈತಿಕತೆ ಅವರಿಗೆ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಏಪ್ರಿಲ್.5) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರವೇ ಕೇಂದ್ರದಿಂದ ಪೆಟ್ರೋಲ್ ಮತ್ತು ರೈಲ್ವೆ ಟಿಕೆಟ್ ಬೆಲೆ ಏರಿಕೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿಯೂ ದರವನ್ನು ಏರಿಕೆ ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿಯವರು ಪ್ರತಿಭಟನೆ ಮಾಡಿದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ. ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ಅನುದಾನವನ್ನು ಕೊಡಿಸಲಿ. ಅದನ್ನು ಬಿಟ್ಟು ನಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ನೈತಿಕತೆ ಅವರಿಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ಉತ್ತಮವಾಗಿದೆ. ಆದರೆ ಬಿಜೆಪಿ ನಾಯಕರೇ ವಿನಃ ಕಾರಣ ಕ್ಷುಲ್ಲಕ ಕಾರಣಗಳಿಗೆ ಪ್ರತಿಭಟನೆ ನಡೆಸಿ ಜಾತಿಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.





